ನವದೆಹಲಿ: ಆಹಾರದಲ್ಲಿ ಶೇ 10ರಷ್ಟು ಅಡುಗೆ ಎಣ್ಣೆ ಬಳಕೆಯನ್ನು ಕಡಿತ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದರು.
ಅಡುಗೆ ಎಣ್ಣೆ ಬಳಕೆ ಕಡಿತ ಮಾಡುವ ಸವಾಲು ಸ್ವೀಕರಿಸುವಂತೆ 10 ಜನರನ್ನು ಇದೇ ವೇಳೆ ಕೋರಿದರು. 'ಒಂದು ವೇಳೆ ಈ 10 ಮಂದಿ ಯಶಸ್ವಿಯಾದರೆ, ಅವರು ಮತ್ತೆ 10 ಮಂದಿಗೆ ಸವಾಲು ಸ್ವೀಕರಿಸಲು ಕೋರಬೇಕು.
ಈ ಪ್ರಕ್ರಿಯೆಯನ್ನು ಹೀಗೆ ಮುಂದುವರಿಸಿ' ಎಂದು ಪ್ರಧಾನಿ ಮೋದಿ ಹೇಳಿದರು.
ಭಾನುವಾರ ಪ್ರಸಾರವಾದ 'ಮನದ ಮಾತು' ರೇಡಿಯೊ ಕಾರ್ಯಕ್ರಮದಲ್ಲಿ ಅವರು ಸವಾಲು ಸ್ವೀಕರಿಸುವ ಈ ಆಟವನ್ನು ಮುಂದಿಟ್ಟರು. ಜಗತ್ತಿನಾದ್ಯಂತ ಜನರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯ ಕುರಿತು ಅವರು ಮಾತನಾಡಿದರು.
'ಅಧ್ಯಯನವೊಂದರ ಪ್ರಕಾರ, ಎಂಟು ಜನರ ಪೈಕಿ ಒಬ್ಬರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2022ರಲ್ಲಿ 250 ಕೋಟಿ ಜನರು ತಮ್ಮ ಎತ್ತರಕ್ಕೆ ಸರಿಯಾಗಿ ಇರಬೇಕಾದ ತೂಕಕ್ಕಿಂತ ಅಧಿಕ ತೂಕ ಹೊಂದಿದ್ದಾರೆ. ಈ ಅಂಕಿ-ಸಂಖ್ಯೆಯು ಬಹಳ ಗಂಭೀರವಾದುದು, ಚಿಂತೆಗೀಡು ಮಾಡುವಂತವು' ಎಂದರು.
'ಬೊಜ್ಜು ಕೇವಲ ವೈಯಕ್ತಿಕ ವಿಚಾರವಲ್ಲ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಕುಟುಂಬದೆಡೆಗಿನ ನಮ್ಮ ಜವಾಬ್ದಾರಿ ಕೂಡ. ಕಳೆದ ಕೆಲವು ವರ್ಷಗಳಲ್ಲಿ ಈ ಸಮಸ್ಯೆ ದ್ವಿಗುಣಗೊಂಡಿದೆ. ಚಿಂತೆಯ ವಿಷಯವೇನೆಂದರೆ, ಮಕ್ಕಳು ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದರು.
ಉತ್ತಮ ಜೀವನಶೈಲಿ ರೂಪಿಸಿಕೊಳ್ಳುವ ಬಗ್ಗೆ ವಿಶ್ವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್, ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅವರ ಮಾತುಗಳನ್ನೂ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
- ಪ್ರಧಾನಿ ನೀಡಿದ ಸೂತ್ರ
'ನಮ್ಮ ಸಣ್ಣ-ಪುಟ್ಟ ಪ್ರಯತ್ನಗಳಿಂದಲೇ ನಾವು ಈ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉದಾಹರಣೆಗೆ ನಾನು ಒಂದು ವಿಧಾನವನ್ನು ಹೇಳಿಕೊಡುತ್ತೇನೆ: ಅಡುಗೆ ಎಣ್ಣೆ ಬಳಕೆಯಲ್ಲಿ ನಾನು ಪ್ರತಿ ತಿಂಗಳು ಶೇ 10ರಷ್ಟು ಕಡಿತ ಮಾಡುತ್ತೇನೆ ಎಂದು ನಿರ್ಧರಿಸಿ. ಸಾಮಾನ್ಯವಾಗಿ ನೀವು ಪ್ರತಿ ತಿಂಗಳು ಎಷ್ಟು ಅಡುಗೆ ಎಣ್ಣೆ ಖರೀದಿ ಮಾಡುತ್ತಾ ಬಂದಿದ್ದೀರೊ ಅದರಲ್ಲಿ ಶೇ 10ರಷ್ಟು ಕಡಿಮೆ ಪ್ರಮಾಣದಲ್ಲಿ ಈಗ ಅಡುಗೆ ಎಣ್ಣೆ ಖರೀದಿಸಿ' ಎಂದು ಪ್ರಧಾನಿ ಮೋದಿ ಸೂತ್ರವೊಂದನ್ನು ನೀಡಿದರು. 'ಅಧಿಕ ಅಡುಗೆ ಎಣ್ಣೆ ಬಳಕೆಯಿಂದ ಹೃದಯ ಕಾಯಿಲೆ ಮಧುಮೇಹ ಮತ್ತು ಅಧಿಕ ಒತ್ತಡಗಳಂಥ ರೋಗಗಳು ಬರುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಯಿಂದ ರೋಗ ಮುಕ್ತವಾದ ಉತ್ತಮ ಭವಿಷ್ಯವನ್ನು ನಾವು ರೂಪಿಸಿಕೊಳ್ಳಬಹುದು. ಆದ್ದರಿಂದ ತಡಮಾಡದೇ ಅಡುಗೆ ಎಣ್ಣೆ ಖರೀದಿಯಲ್ಲಿ ಕಡಿತ ಮಾಡಿ' ಎಂದರು.
'ಮಾ.8: ಜಾಲತಾಣಗಳ ಖಾತೆ ನಿರ್ವಹಣೆ ಮಹಿಳೆಯರಿಗೆ'
'ಅಂತರರಾಷ್ಟ್ರೀಯ ಮಹಿಳಾ ದಿನದಂದು (ಮಾರ್ಚ್ 8) ನಾನು ನನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ವಹಿಸಲು ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ನೀಡಲಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. 'ಮಹಿಳೆಯರ ಅದಮ್ಯ ಚೇತನವನ್ನು ಸಂಭ್ರಮಿಸುತ್ತಾ ಗೌರವಿಸುತ್ತಾ ನಾವು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸೋಣ' ಎಂದರು. 2020ರಲ್ಲಿಯೂ ಮೋದಿ ಅವರು ಇದೇ ರೀತಿ ತಮ್ಮ ಜಾಲತಾಣಗಳ ಖಾತೆಗಳನ್ನು ನಿರ್ವಹಿಸುವ ಅವಕಾಶವನ್ನು ಏಳು ಮಹಿಳಾ ಸಾಧಕರಿಗೆ ನೀಡಿದ್ದರು.