ಗುವಾಹಟಿ: ರಾಷ್ಟ್ರಪತಿ ಆಡಳಿತ ಜಾರಿ ಬಳಿಕ ಮಣಿಪುರದಲ್ಲಿ ಭದ್ರತಾ ಕಾರ್ಯಾಚರಣೆ ತೀವ್ರಗೊಂಡಿದ್ದು, 10 ಬಂಡುಕೋರರನ್ನು ಬಂಧಿಸಲಾಗಿದೆ ಮತ್ತು 15 ಕಚ್ಚಾ ಬಾಂಬ್‌ಗಳನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ.
ಕುಕಿ ಪ್ರಾಬಲ್ಯವಿರುವ ಟೆಂಗ್‌ನೌಪಾಲ್ ಜಿಲ್ಲೆಯ ಸೇನಮ್ ಗ್ರಾಮದಲ್ಲಿ ಎರಡು ದೂರಗಾಮಿ ಪಿರಂಗಿಗಳು, ಒಂದು 9ಎಂಎಂ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಚುರಚಾಂದಪುರ ಜಿಲ್ಲೆಯ ಓಲ್ಡ್ ಖೌಖೌಲ್ ಗ್ರಾಮದಲ್ಲಿ ಬಂಡುಕೋರ ಸಂಘಟನೆ ಕುಕಿ ನ್ಯಾಷನಲ್ ಗ್ರೂಪ್(ಕೆಎನ್‌ಎ)ನ ಐವರು ಶಂಕಿತ ಸದಸ್ಯರನ್ನು ಬಂಧಿಸಲಾಗಿದೆ. ಅವರಿಂದ ಎರಡು ಎ.ಕೆ 47 ರೈಫಲ್, ಒಂದು 7.62 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚುರಚಾಂದಪುರದ ಕ್ವಾಟ್ಲಿಯನ್ ಗ್ರಾಮ ಮತ್ತು ಕಪ್ರಾಂಗ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಕಿಗಳು ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗಳನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಕುಕಿಗಳು ಪ್ರವಾಸಿಗರಿಗೆ ಬಲವಂತವಾಗಿ ಪಾಸ್ ನೀಡಿ ₹100 ಪಡೆಯುತ್ತಿದ್ದರು.
ಮೈತೇಯಿಗಳ ಪ್ರಾಬಲ್ಯವಿರುವ ಗ್ರಾಮದ ಇಬ್ಬರು ಮಹಿಳೆಯರು ಸೇರಿದಂತೆ ಕಣಿವೆ ಮೂಲದ ಬಂಡುಕೋರ ಗುಂಪು ಕೆಸಿಪಿಯ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ. ಅವರು ಸುಲಿಗೆ ಮತ್ತು ಶಸ್ತ್ರಾಸ್ತ್ರ ಸಾಗಣೆಯಲ್ಲಿ ತೊಡಗಿದ್ದರು. ಅವರ ಬಳಿ ಇದ್ದ ಎರಡು 9 ಎಂಎಂ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಬಂಡುಕೋರ ಸಂಘಟಬನೆ ಪ್ರೀಪಕ್ (ಪಿಆರ್‌ಒ)ಗೆ ಸೇರಿದ ಬಂಡುಕೋರರೊಬ್ಬರನ್ನು ಬಿಷ್ಣುಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.