ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣದ ವೇಳೆ ಘೋಷಣೆಗಳನ್ನು ಕೂಗಿದ ಕಾರಣಕ್ಕಾಗಿ ಪ್ರತಿಪಕ್ಷದ ನಾಯಕಿ ಆತಿಶಿ ಸೇರಿದಂತೆ ಎಎಪಿಯ 12 ಶಾಸಕರನ್ನು ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಸದನದಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ.
ಆತಿಶಿ, ಗೋಪಾಲ್ ರಾಯ್, ವೀರ್ ಸಿಂಗ್ ಧಿಂಗನ್, ಮುಖೇಶ್ ಅಹ್ಲಾವತ್, ಚೌಧರಿ ಜುಬೇರ್ ಅಹ್ಮದ್, ಅನಿಲ್ ಝಾ, ವಿಶೇಷ್ ರವಿ ಮತ್ತು ಜರ್ನೈಲ್ ಸಿಂಗ್ ಹೊರಹಾಕಲ್ಪಟ್ಟ ಎಎಪಿಯ ಪ್ರಮುಖ ನಾಯಕರಾಗಿದ್ದಾರೆ.
ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿಯವರು ಅಗೌರವ ತೋರಿದ್ದಾರೆ ಎಂದು ಆತಿಶಿ ಆರೋಪಿಸಿದ್ದಾರೆ.
'ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜಬಣ್ಣವನ್ನು ತೋರಿಸಿದೆ. ಬಾಬಾಸಾಹೇಬರಿಗೆ ಮೋದಿ ಪರ್ಯಾಯ ಎಂದು ಆ ಪಕ್ಷ ನಂಬುತ್ತದೆಯೇ?' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತವು ದೆಹಲಿ ಸೆಕ್ರೆಟರಿಯೇಟ್ ಮತ್ತು ವಿಧಾನಸಭೆ ಹಾಗೂ ಮುಖ್ಯಮಂತ್ರಿಗಳ ಕಚೇರಿಯಿಂದ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೆಗೆದುಹಾಕಿದೆ ಎಂದು ಅವರು ಆರೋಪಿಸಿದ್ದಾರೆ.