ಕುಂಬಳೆ: ಮಮ್ಮುಂಞÂ್ಞ ಹಾಜಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಉಮ್ಮರ್ ಅಲಿ ಶಿಹಾಬ್ ತಂಙಳ್ ಇಸ್ಲಾಮಿಕ್ ಅಕಾಡೆಮಿ ಕೊಕ್ಕೆಜಾಲು ವಾಫಿ ಕಾಲೇಜಿನ 13ನೇ ವಾರ್ಷಿಕ ಪ್ರಥಮ ಸನದ್ ದಾನ ಮಹಾಸಮ್ಮೇಳನ ಫೆ. 21 ರಿಂದ 23 ರ ವರೆಗೆ ಕೊಕ್ಕೆಜಾಲು ವಾಫಿ ಕಾಲೇಜಿನ ಆವರಣದಲ್ಲಿರುವ ಮರ್ಹೂಮ್ ಮಮ್ಮುಂಞÂ್ಞ ಹಾಜಿ ನಗರದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಗುರುವಾರ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು(ಫೆ.21) ಮಧ್ಯಾಹ್ನ 2:ಕ್ಕೆ ನೌಫಲ್ ಅಲಿ ಶಿಹಾಬ್ ತಂಙಳ್ ಅವರು ಧ್ವಜಾರೋಹಣಗೈಯ್ಯುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡುವರು. ಸಂಜೆ 4:30 ಕ್ಕೆ ಎನ್‍ಪಿಎಂ ಫಜಲ್ ಹಮೀದ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನಂಗೈ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಭೆಯನ್ನು ಮುನ್ನಡೆಸಲಿದ್ದಾರೆ. ಮಗ್ರಿಬ್ ಪ್ರಾರ್ಥನೆಯ ನಂತರ ಸಮ್ಮೇಳನವನ್ನು ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಕೇರಳದ ಸುಮಾರು ಹತ್ತು ಪ್ರತಿಭಾನ್ವಿತ ತಂಡಗಳನ್ನು ಒಳಗೊಂಡ ಆಲ್ ಕೇರಳ ಮ್ಯಾಶಪ್ ಸ್ಪರ್ಧೆಯನ್ನು ಉದ್ಘಾಟನಾ ಸಮ್ಮೇಳನದ ಜೊತೆಗೆ ನಡೆಸಲಾಗುವುದು.
ಸಮ್ಮೇಳನದ ಎರಡನೇ ದಿನವಾದ ನಾಳೆ(ಶನಿವಾರ) ಬೆಳಿಗ್ಗೆ 9:ಕ್ಕೆ "ಪ್ರಗತಿಶೀಲವಾದದ ಕಾನೂನು ದೋಷಗಳು" ಎಂಬ ವಿಷಯದ ಕುರಿತು ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಿಂದ ಚರ್ಚೆ ನಡೆಯಲಿದೆ. ಮಧ್ಯಾಹ್ನ, ಧಾರ್ಮಿಕ ಸಾಮರಸ್ಯದ ಸಮಕಾಲೀನ ಪ್ರಸ್ತುತತೆಯನ್ನು ಎತ್ತಿ ತೋರಿಸುವ ಸೌಹಾರ್ಧ ಸಮ್ಮೇಳನ ನಡೆಯಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಫಾದರ್ ವಿಶಾಲ್ ಮೆಲ್ವಿನ್ ಮೋನಿಸ್ ಕಯ್ಯಾರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪತ್ರಿಕಾ ಸಂಪಾದಕ ಎ.ಬಿ. ಕುಟ್ಟಿಯಾನ ಸಹಿತ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 8:30 ಕ್ಕೆ ಉತ್ತರ ಕೇರಳದ ಪ್ರಮುಖ ವಾಗ್ಮಿ ಹಾಫಿüಲ್ ಮುನ್ಹಿ ವಾಫಿ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಧ್ಯಾಹ್ನ 2:ಕ್ಕೆ ಕುಟುಂಬ ಸಂಗಮ ನಡೆಯಲಿದೆ. ಸಂಜೆ 7:ಕ್ಕೆ ಕೋಝಿಕ್ಕೋಡ್ ವಲಿಯ ಖಾಜಿ ಸೈಯದ್ ನಾಸರ್ ಹಯ್ಯ್ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ಸುಮಾರು 130 ಯುವ ವಿದ್ವಾಂಸರಿಗೆ ಶಿಹಾಬಿ ಸನದ್ ಪ್ರದಾನ ಮಾಡಲಿದ್ದಾರೆ. ಸಿಐಸಿ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಅಬ್ದುಲ್ ಹಕೀಮ್ ಫೈಝಿ ಅದ್ರಿಸ್ಸೆರಿ ಅವರು ಸನದ್ ಉಪನ್ಯಾಸ ನೀಡಿ ಮಾತನಾಡುವರು. ಸೈಯದ್ ಜೈನುಲ್ ಆಬಿದಿನ್ ತಂಙಳ್ ಕುನ್ನಂಗೈ, ಪಿ.ಎಸ್.ಎಚ್. ತ†ಂಙಳ್ (ಸಿಐಸಿ ಉಪಾಧ್ಯಕ್ಷ), ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ. ಅಶ್ರಫ್ ಮತ್ತು ಎನ್.ಎ. ನೆಲ್ಲಿಕುನ್ನು ಮೊದಲಾದವರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಇಸ್ಲಾಮಿಕ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾಂಶುಪಾಲ ಎಂ.ಎಸ್. ಖಾಲಿದ್ ಬಾಖವಿ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಝಡ್.ಎ. ಕಯ್ಯಾರ್, ಉಪ ಪ್ರಾಂಶುಪಾಲ ಅಹ್ಮದ್ ಕಬೀರ್ ಹುದವಿ, ಮತ್ತು ಸಮಿತಿ ಸದಸ್ಯರಾದ ಇದ್ದೀನ್ ಅಬ್ಬಾ, ಚೊಕ್ಕಾಡಿ ಮುಹಮ್ಮದ್ ಹಾಜಿ, ಮತ್ತು ಉನೈಸ್ ವಾಫಿ ಉಪಸ್ಥಿತರಿದ್ದರು.