ಹೈದರಾಬಾದ್: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದ ಸುರಂಗದ ಮೇಲ್ಭಾಗ ಕುಸಿದಿದ್ದು, ಕನಿಷ್ಠ 8 ಕೆಲಸಗಾರರು ಸಿಲುಕಿದ್ದಾರೆ. ಈ ಘಟನೆ 2 ವರ್ಷ ಹಿಂದೆ ಸಂಭವಿಸಿದ ಉತ್ತರಾಖಂಡ ಸುರಂಗ ಕುಸಿತದ ಘಟನೆಯನ್ನೇ ನೆನಪಿಸಿದೆ.14 ಕಿ.ಮೀ.ನಷ್ಟು ಸುರಂಗದ ಒಳಗೆ ಕಾರ್ಮಿಕರು ಸಿಲುಕಿದ್ದಾರೆ.
ಅವರ ರಕ್ಷಣೆಗೆ ಉತ್ತರಾಖಂಡದಲ್ಲಿ ಶ್ರಮ ಪಟ್ಟಿದ್ದ ಸುರಂಗ ತಜ್ಞರು, ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ಗೆ ಮೊರೆ ಹೋಗಲಾಗಿದೆ. ಶೀಘ್ರ ಅವರು ಆಗಮಿಸಿ ರಕ್ಷಣಾ ಕಾರ್ಯ ಶುರು ಮಾಡಲಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಆಂಧ್ರ ನೀರಾವರಿ ಸಚಿವ ಉತ್ತಮಕುಮಾರ್ ರೆಡ್ಡಿ ಹೇಳಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಸಿಎಂ ರೇವಂತ ರೆಡ್ಡಿ ಅವರ ಜತೆ ಫೋನ್‌ನಲ್ಲಿ ಮಾತನಾಡಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಇಬ್ಬರು ಎಂಜಿನಿಯರ್‌ಗಳು, ಇಬ್ಬರು ಮಶಿನ್ ಆಪರೇಟರುಗಳು ಹಾಗೂ 4 ಕಾರ್ಮಿಕರು ಸಿಲುಕಿಕೊಂಡವರು.
ಆಗಿದ್ದೇನು?:
ಕಾರ್ಮಿಕರು ಕೆಲಸದ ನಿಮಿತ್ತ 14 ಕಿ.ಮೀ.ನಷ್ಟು ಒಳಗೆ ಹೋದಾಗ ಸುರಂಗದ ಮೇಲ್ಭಾಗ ಕುಸಿದು ಅವಘಡ ಸಂಭವಿಸಿದೆ. 200 ಮೀ. ಉದ್ದಕ್ಕೂ ಕೆಸರು ತುಂಬಿಕೊಂಡಿದೆ. ಈ ವೇಳೆ ದೊಡ್ಡ ಸದ್ದು ಕೂಡ ಕೇಳಿದೆ ಎನ್ನಲಾಗಿದ್ದು, ಇದು ಭೂಗರ್ಭದಲ್ಲಿ ಆದ ವ್ಯತ್ಯಾಸ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಚಿವ ಉತ್ತಮಕುಮಾರ್ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಬಿ. ಸಂತೋಷ್ 'ಸುರಂಗದ ಒಳಗೆ ಸಿಲುಕಿರುವವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಏರ್ ಚೇಂಬರ್ ಮತ್ತು ಕನ್ವೇಯರ್ ಬೆಲ್ಟ್ ಎರಡೂ ಕುಸಿದಿವೆ. 14 ಕಿ.ಮೀ.ನಷ್ಟು ಒಳಗೆ ಸಿಲುಕಿರುವುದು ಸವಾಲು. ಆಂತರಿಕ ಸಂವಹನ ಕಾರ್ಯವಿಧಾನವೂ ವಿಫಲವಾಗಿದೆ' ಎಂದು ತಿಳಿಸಿದ್ದಾರೆ.
ನೆರವಿಗೆ ಸರ್ಕಾರ:
ಮುಖ್ಯಮಂತ್ರಿ ಎಂ. ರೇವಂತ ರೆಡ್ಡಿ ಅವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಅವರ ನಿರ್ದೇಶನದಂತೆ ರಾಜ್ಯ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ, ನೀರಾವರಿ ಸಲಹೆಗಾರ ಆದಿತ್ಯನಾಥ್ ದಾಸ್ ಮತ್ತು ಇತರ ಅಧಿಕಾರಿಗಳು ವಿಶೇಷ ಹೆಲಿಕಾಪ್ಟರ್‌ನಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಕೇಂದ್ರ ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ, ಒಳಗೆ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ 17 ದಿನ ಸಿಲುಕಿದ್ದ 41 ಜನ:
ಉತ್ತರಾಖಂಡದ ಉತ್ತರಕಾಶಿ ಬಳಿ 2023ರ ನ.12ರಂದು ಸುರಂಗ ಕುಸಿದು 41 ಕಾರ್ಮಿಕರು ಸಿಲುಕಿದ್ದರು. 17 ದಿನಗಳ ಹರಸಾಹಸದ ನಂತರ ಅವರನ್ನು ನ.28ರಂದು ರಕ್ಷಿಸಲಾಗಿತ್ತು.