ವಾಷಿಂಗ್ಟನ್: ಭಾರತದ ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಜೋ ಬೈಡನ್ ಆಡಳಿತವು (ಅಮೆರಿಕದ ಹಿಂದಿನ ಅಧ್ಯಕ್ಷ) 1.8 ಕೋಟಿ ಡಾಲರ್ (₹155 ಕೋಟಿ) ನೆರವು ನೀಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಯುಎಸ್‌ಏಡ್'ನಡಿ ಭಾರತಕ್ಕೆ ಹಣ ನೀಡಿರುವುದಕ್ಕೆ ತಮ್ಮ ಟೀಕಾಪ್ರಕಾರ ಮುಂದುವರಿಸಿದ ಟ್ರಂಪ್, 'ಭಾರತಕ್ಕೆ ಆ ಹಣದ ಅಗತ್ಯವೇ ಇರಲಿಲ್ಲ' ಎಂದು ವಾದಿಸಿದ್ದಾರೆ.
ಶನಿವಾರ ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆಯಕ್ಷನ್ ಕಾನ್ಫರೆನ್ಸ್‌ನಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಅವರು 'ಭಾರತದಲ್ಲಿ ಚುನಾವಣೆ ವೇಳೆ ಮತ ಪ್ರಮಾಣ ಹೆಚ್ಚಿಸುವುದಕ್ಕೆ 2.1 ಕೋಟಿ ಡಾಲರ್ (₹182 ಕೋಟಿ ) ನೀಡಲಾಗಿದೆ' ಎಂದು ಹೇಳುತ್ತಾ ಬಂದಿದ್ದರು.
ಭಾರತವು ಅಮೆರಿಕದಿಂದ ಸಾಕಷ್ಟು ಲಾಭ ಪಡೆದುಕೊಳ್ಳುತ್ತಿದೆ ಎಂದು ತಮ್ಮ ಭಾಷಣದಲ್ಲಿ ಅವರು ಆರೋಪಿಸಿದರು. 'ಭಾರತದ ಚುನಾವಣೆಗೆ ನೆರವಾಗಲು 1.8 ಕೋಟಿ ಡಾಲರ್ ನೀಡಲಾಗಿದೆ. ಇದು ಏಕೆ ಬೇಕಿತ್ತು? ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವ ಹಳೆಯ ವ್ಯವಸ್ಥೆಗೆ ನಾವೇಕೆ ಹೋಗಬಾರದು? ಭಾರತದ ಚುನಾವಣೆಗೆ ನಾವು ಹಣ ನೀಡುತ್ತಿದ್ದೇವೆ. ಆದರೆ, ಅವರಿಗೆ ನಮ್ಮ ಹಣದ ಅಗತ್ಯವಿಲ್ಲ' ಎಂದು ಹೇಳಿದರು.
'ಅವರು (ಭಾರತ) ನಮ್ಮಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತಾರೆ. ಅಮೆರಿಕದಿಂದ ರವಾನಿಸುವ ಸರಕುಗಳಿಗೆ ಅತಿಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ನಮ್ಮ ಉತ್ಪನ್ನಗಳಿಗೆ ಅಲ್ಲಿ ಶೇ 200ರಷ್ಟು ಸುಂಕ ವಿಧಿಸಲಾಗುತ್ತದೆ. ಹಾಗಿದ್ದರೂ, ಅವರ ಚುನಾವಣೆಗೆ ನೆರವಾಗಲು ನಾವು ಅವರಿಗೆ ಸಾಕಷ್ಟು ಹಣ ನೀಡುತ್ತಿದ್ದೇವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟ್ರಂಪ್ ಅವರು ಗುರುವಾರ ರಿಪಬ್ಲಿಕನ್ ಗವರ್ನರ್ಸ್ ಅಸೋಸಿಯೇಷನ್ ಸಭೆಯಲ್ಲಿ ಮಾತನಾಡುತ್ತಾ, 'ಮತ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ, ಭಾರತದಲ್ಲಿನ ನನ್ನ ಮಿತ್ರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ 2.1 ಕೋಟಿ ಡಾಲರ್ ನೀಡಲಾಗುತ್ತಿತ್ತು' ಎಂದಿದ್ದರು. ಭಾರತದ ಚುನಾವಣೆಗೆ 'ಯುಎಸ್‌ಏಡ್'ನಡಿ ಹಣಕಾಸಿನ ನೆರವು ನೀಡಿದ್ದನ್ನು ಅವರು ಮಂಗಳವಾರ ಮತ್ತು ಬುಧವಾರವೂ ಉಲ್ಲೇಖಿಸಿ, ಬೈಡನ್ ಆಡಳಿತವನ್ನು ಟೀಕಿಸಿದ್ದರು.
ಟ್ರಂಪ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ವಾಕ್ಸಮರ ನಡೆಸಿದ್ದಾರೆ.
'ಯುಎಸ್‌ಏಡ್' ಅಡಿಯಲ್ಲಿ ಬಾಂಗ್ಲಾದೇಶಕ್ಕೆ 2.9 ಕೋಟಿ ಡಾಲರ್ ನೆರವು ನೀಡಿರುವುದನ್ನೂ ಟ್ರಂಪ್ ಟೀಕಿಸಿದರು. 'ಬಾಂಗ್ಲಾದಲ್ಲಿ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಲು ಅಮೆರಿಕದಿಂದ 2.9 ಕೋಟಿ ಡಾಲರ್ ನೆರವು ಹೋಗುತ್ತದೆ. ಅಲ್ಲಿನ ಮತದಾರರಿಗೆ ಎಡಪಂಥೀಯ ಸಿದ್ಧಾಂತ ಹೊಂದಿರುವವರಿಗೆ ಮತ ಹಾಕಲು ಇದರಿಂದ ನೆರವಾಗಲಿದೆ' ಎಂದು ಯಾರನ್ನೂ ಹೆಸರಿಸದೆಯೇ ಅವರು ವಾಗ್ದಾಳಿ ನಡೆಸಿದರು.
ಜೈರಾಮ್ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ)ಬಿಜೆಪಿಯು ಅಮೆರಿಕದಿಂದ ಹೊರಬಿದ್ದ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ದೇಶ ವಿರೋಧಿ ಕೆಲಸ ಮಾಡಿದ್ದು ಏಕೆ?
ಮತದಾನ ಪ್ರಮಾಣ ಹೆಚ್ಚಿಸಲು ನೆರವು ಪಡೆದಿಲ್ಲ: ವರದಿ
ನವದೆಹಲಿ: 2023-24ನೇ ಸಾಲಿನಲ್ಲಿ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 'ಯುಎಸ್‌ಏಡ್' ಅಡಿಯಲ್ಲಿ ಯಾವುದೇ ನೆರವು ಪಡೆದಿಲ್ಲ ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ವರದಿ ಹೇಳಿದೆ. ಭಾರತೀಯ ಚುನಾವಣೆಗಳ ಮೇಲೆ ಪ್ರಭಾವ ಬೀರುವಲ್ಲಿ 'ಯುಎಸ್‌ಏಡ್'ನ ಪಾತ್ರವಿದೆ ಎಂಬ ವಿವಾದದ ನಡುವೆಯೇ ಈ ವಿವರ ಬಹಿರಂಗವಾಗಿದೆ. 'ಪ್ರಸ್ತುತ ಅಂದಾಜು 75 ಕೋಟಿ ಡಾಲರ್ ಮೊತ್ತದ (₹6500 ಕೋಟಿ) ಏಳು ಯೋಜನೆಗಳನ್ನು 'ಯುಎಸ್‌ಏಡ್' ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸುತ್ತಿದೆ' ಎಂದು ಹಣಕಾಸು ಸಚಿವಾಲಯದ 2023-24ರ ವಾರ್ಷಿಕ ವರದಿ ತಿಳಿಸಿದೆ. 'ಒಪ್ಪಂದದ ಪ್ರಕಾರ 'ಯುಎಸ್‌ಏಡ್' 2023-24ರ ಹಣಕಾಸು ವರ್ಷದಲ್ಲಿ ಈ ಏಳು ಯೋಜನೆಗಳಿಗೆ 9.7 ಕೋಟಿ ಡಾಲರ್ (ಅಂದಾಜು ₹ 825 ಕೋಟಿ) ನೀಡಿದೆ' ಎಂಬ ವಿವರ ವರದಿಯಲ್ಲಿದೆ. '2023-24ರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಯಾವುದೇ ಹಣ ನೀಡಲಾಗಿಲ್ಲ. ಬದಲಾಗಿ ಕೃಷಿ ಮತ್ತು ಆಹಾರ ಭದ್ರತೆ ಕಾರ್ಯಕ್ರಮಗಳು ನೀರು ಹಾಗೂ ನೈರ್ಮಲ್ಯ ನವೀಕರಿಸಬಹುದಾದ ಇಂಧನ ವಿಕೋಪ ನಿರ್ವಹಣೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೆರವು ಲಭಿಸಿದೆ' ಎಂದಿದೆ.
ಪ್ರಧಾನಿ ಉತ್ತರಿಸಲಿ: ಕಾಂಗ್ರೆಸ್
ನವದೆಹಲಿ: 'ಯುಎಸ್‌ಏಡ್' ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 'ಡೊನಾಲ್ಡ್ ಟ್ರಂಪ್ ಮತ್ತು ಇಲಾನ್ ಮಸ್ಕ್ ಅವರು ಭಾರತವನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ಪ್ರಧಾನಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಉತ್ತರಿಸಬೇಕು. ನಮ್ಮ ಸರ್ಕಾರ ಈ ಬಗ್ಗೆ ಏಕೆ ಮೌನವಾಗಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. 'ಅಮೆರಿಕವು 2022ರಲ್ಲಿ 2.1 ಕೋಟಿ ಡಾಲರ್ ನೀಡಿರುವುದು ಭಾರತಕ್ಕೆ ಅಲ್ಲ ಆ ಹಣ ಬಾಂಗ್ಲಾಕ್ಕೆ ನೀಡಿದೆ. ಇಲಾನ್ ಮಸ್ಕ್ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಟ್ರಂಪ್ ಅವರು ಢಾಕಾ ಮತ್ತು ಭಾರತ- ಈ ಎರಡರ ನಡುವೆ ಗೊಂದಲಕ್ಕೆ ಒಳಗಾದರು. ಅಮೆರಿಕದಿಂದ ಬಂದ ಸುಳ್ಳು ಸುದ್ದಿಯನ್ನು ಆಧರಿಸಿ ಬಿಜೆಪಿಯವರು ವಿರೋಧ ಪಕ್ಷದ ಮೇಲೆ ಆರೋಪ ಹೊರಿಸುವುದು ದೇಶದ್ರೋಹವಲ್ಲದೆ ಇನ್ನೇನು?' ಎಂದು ಟೀಕಿಸಿದರು.