ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲರು ಹತರಾಗಿದ್ದಾರೆ. ಈ 8 ಮಂದಿ ಕುರಿತಂತೆ ಮಾಹಿತಿ ನೀಡಿದವರಿಗೆ ₹16 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇವರೆಲ್ಲ ಹಿರಿಯ ನಕ್ಸಲರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ತೊಡ್ಕಾ ಗ್ರಾಮದ ಬಳಿಯ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ರಾಜ್ಯ ಪೊಲೀಸ್ ಘಟಕದ ಜಿಲ್ಲಾ ಮೀಸಲು ಪಡೆಯ ಇಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
ಹತ್ಯೆಯಾದ ನಕ್ಸಲರಲ್ಲಿ, ಪಶ್ಚಿಮ ಬಸ್ತಾರ್ ವಿಭಾಗದ ಗಂಗಲೂರು ಪ್ರದೇಶ ಸಮಿತಿಯ ಸದಸ್ಯ ಕಮಲೇಶ್ ನೀಲಕಂಠ (24) ಅವರ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯೆಯಾದವರ ಪೈಕಿ ತತಿ ಕಮಲು ಮತ್ತು ಮಂಗಲ್ ತತಿ ಗಂಗಲೂರು ಎಲ್‌ಒಎಸ್‌ಗೆ(ಸ್ಥಳೀಯ ಗುಂಪು) ಸೇರಿದವರಾಗಿದ್ದು, ಇವರ ತಲೆಗೆ ತಲಾ₹3 ಲಕ್ಷ ಇನಾಮು ಘೋಷಣೆಯಾಗಿತ್ತು.
ಮೃತಪಟ್ಟ ಇತರೆ ನಕ್ಸಲರನ್ನು ಲಚ್ಚು ಪೋತಂ (40), ಶಂಕರ್ ತಾಟಿ (26), ರಾಜು ತಾಟಿ, ವಿಜ್ಜು ಪದಮ್ (22) ಮತ್ತು ಸನ್ನು ತಾಟಿ (40) ಎಂದು ಗುರುತಿಸಲಾಗಿದ್ದು, ನಕ್ಸಲ್ ಚಟುವಟಿಕೆಯ ವಿವಿಧ ವಿಭಾಗಗಳಲ್ಲಿ ಸಕ್ರಿಯರಾಗಿದ್ದರು. ಇವರ ತಲೆಗೂ ತಲಾ ₹1 ಲಕ್ಷ ಇನಾಮು ಘೋಷಣೆಯಾಗಿತ್ತು.
ಎನ್‌ಕೌಂಟರ್ ಸ್ಥಳದಿಂದ ಒಂದು ಇನ್ಸಾಸ್ ರೈಫಲ್, ಒಂದು ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಮತ್ತು ಅದರ 10 ಶೆಲ್‌ಗಳು, ಎರಡು 12-ಬೋರ್ ರೈಫಲ್‌ಗಳು ಮತ್ತು ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ಇದುವರೆಗೆ ಛತ್ತೀಸಗಢದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 49 ನಕ್ಸಲರು ಹತರಾಗಿದ್ದಾರೆ. ಆ ಪೈಕಿ ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ವಿಭಾಗದಲ್ಲಿ 33 ಮಂದಿಯನ್ನು ಹೊಡೆದುರುಳಿಸಲಾಗಿದೆ.