ನವದೆಹಲಿ: ಮತದಾನ ಹೆಚ್ಚಳ ಮಾಡುವುದಕ್ಕೆ 'ಯುಎಸ್‌ಏಡ್'ನಡಿ ಭಾರತಕ್ಕೆ ಹಣ ನೀಡಲಾಗುತ್ತಿತ್ತು ಎಂಬ ವಿವಾದದ ಬಿಸಿ ಈಗ ಬಿಜೆಪಿಗೆ ತಟ್ಟಿದೆ.
'ಮತ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ, ಭಾರತದಲ್ಲಿನ ನನ್ನ ಮಿತ್ರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ₹182 ಕೋಟಿ (21 ಮಿಲಿಯನ್ ಡಾಲರ್) ನೀಡಲಾಗುತ್ತಿತ್ತು' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧದ ಟೀಕಾಪ್ರಹಾರವನ್ನು ಹರಿತಗೊಳಿಸಿದೆ.
'ಟ್ರಂಪ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಕೇಸರಿ ಪಕ್ಷ ಮೌನಕ್ಕೆ ಶರಣಾಗಿರುವುದು ಏಕೆ? ಅವರ ಹೇಳಿಕೆಯನ್ನು ಬಿಜೆಪಿ ಅಲ್ಲಗಳೆಯುತ್ತಿಲ್ಲವೇಕೆ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಯುಎಸ್‌ಏಡ್ ವಿವಾದವನ್ನು ಮುಂದಿಟ್ಟು, ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧವೂ ಕಾಂಗ್ರೆಸ್ ಟೀಕೆ ಮಾಡಿದೆ. ಎಎಪಿ ಮತ್ತು ಕಾಂಗ್ರೆಸ್, 'ಇಂಡಿಯಾ' ಮೈತ್ರಿಕೂಟದ ಅಂಗಪಕ್ಷಗಳು ಎಂಬುದು ವಿಶೇಷ.
'2012ರಲ್ಲಿ ಯುಎಸ್‌ಏಡ್‌ನಡಿ ನೀಡಲಾಗಿದ್ದ 3.16 ಕೋಟಿಗೂ (3.65 ಲಕ್ಷ ಡಾಲರ್) ಎಎಪಿ ರಚಿಸಿರುವುದಕ್ಕೂ ಏನಾದರೂ ಸಂಬಂಧ ಇದೆಯೇ' ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.
'ಬಿಜೆಪಿ ವರಿಷ್ಠ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ 'ಪಿತೂರಿ' ನಡೆಸಿ, ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಅಭಿಯಾನ ಆಗ ನಡೆದಿತ್ತು. ಯುಎಸ್‌ಏಡ್ ನಡಿ ನೀಡಲಾಗಿದ್ದ ₹ 3.16 ಕೋಟಿ ಪೈಕಿ ಭಾಗಶಃ ಮೊತ್ತವನ್ನು ಈ ಅಭಿಯಾನಕ್ಕೆ ಬಳಸಲಾಗಿತ್ತೇ' ಎಂದು ಖೇರಾ ಪ್ರಶ್ನಿಸಿದ್ದಾರೆ.
'ಯುಎಸ್‌ಏಡ್ ಕುರಿತ ಟ್ರಂಪ್ ಹೇಳಿಕೆಗಳು ಬಹಿರಂಗಗೊಂಡವು. ಇದರ ಬೆನ್ನಲ್ಲೇ, 'ಭಾರತಕ್ಕೆ ₹182 ಕೋಟಿ ಕಳುಹಿಸುವ ಯೋಜನೆ ಕುರಿತ ದಾಖಲೆ ಇಲ್ಲ' ಎಂಬುದಾಗಿ 'ವಾಷಿಂಗ್ಟನ್ ಪೋಸ್ಟ್' ವರದಿ ಪ್ರಕಟಿಸಿತು.
ಆದರೆ, ಮೋದಿ ನೇತೃತ್ವದ ಸರ್ಕಾರ, ಅದರ ಆರ್ಥಿಕ ಸಲಹೆಗಾರ, ಬಿಜೆಪಿಯ ಐ.ಟಿ ಘಟಕದ ಮುಖಸ್ಥರು ಹಾಗೂ ಬಿಜೆಪಿ ಪರವಾಗಿ ಕೆಲಸ ಮಾಡುವ ಗುಂಪುಗಳು ಮತ್ತು ಮಾಧ್ಯಮಗಳಿಂದ ಈ ವಿಚಾರವನ್ನು ಮುಂದಿಟ್ಟುಕೊಂಡು 'ಡೀಪ್ ಸ್ಟೇಟ್' ಹಾಗೂ 'ವಿದೇಶಿ ಹಸ್ತಕ್ಷೇಪ' ಎಂಬ ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಪ್ರಯತ್ನಗಳು ನಡೆದವು ಎಂದೂ ಖೇರಾ ಕುಟುಕಿದ್ದಾರೆ.
'ಯುಎಸ್‌ಏಡ್‌ನಿಂದ ಎಷ್ಟು ಹಣ ಸ್ವೀಕರಿಸಲಾಗಿತ್ತು. ಎಷ್ಟು ಜನರು, ಸಾಂಸ್ಕೃತಿಕ ಸಂಘಟನೆ ಎಂಬ ಮುಖವಾಡ ಹೊತ್ತ ಎಷ್ಟು ರಾಜಕೀಯ ಪಕ್ಷಗಳು ಹಣ ಪಡೆದಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು' ಎಂದು ಆಗ್ರಹಿಸಿದ್ದಾರೆ.

ಎಷ್ಟು ಹಣ ಯಾವಾಗ ಪಾವತಿ?
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖಿಸಿರುವ ಪವನ್ ಖೇರಾ ಯುಎಸ್‌ಏಡ್‌ನಡಿ ಯಾವ ಯಾವ ವರ್ಷ ಯಾವ ಸಂಘಟನೆಗಳಿಗೆ ಹಣ ನೀಡಲಾಗಿದೆ ಎಂಬ ವಿವರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 2001ರಿಂದ 2024ರ ನಡುವೆ ₹ 25 ಸಾವಿರ ಕೋಟಿ (2.9 ಶತಕೋಟಿ ಡಾಲರ್) ನೀಡಲಾಗಿದೆ. ಈ ಪೈಕಿ ಯುಪಿಎ ಅವಧಿಯಲ್ಲಿ ₹10 ಸಾವಿರ ಕೋಟಿ (1.2 ಶತಕೋಟಿ ಡಾಲರ್) ನೀಡಲಾಗಿದ್ದರೆ ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ₹ 11 ಸಾವಿರ ಕೋಟಿ (1.3 ಶತಕೋಟಿ ಡಾಲರ್) ನೀಡಲಾಗಿದೆ. ಯುಎಸ್‌ಏಡ್ ಮೊದಲ ಕಂತಿನ ಹಣ ₹ 3.16 ಕೋಟಿ 'ಡೆಮಾಕ್ರಟಿಕ್ ಪಾರ್ಟಿಸಿಪೇಷನ್ ಅಂಡ್ ಸಿವಿಲ್ ಸೊಸೈಟಿ'ಗೆ ಅಮೆರಿಕದ ಹಣಕಾಸು ವರ್ಷ 2013ರಲ್ಲಿ ಸಂದಾಯವಾಗಿದೆ. ಈ ಹಣಕಾಸು ವರ್ಷವು 2012ರ ಅಕ್ಟೋಬರ್ 1ರಂದು ಆರಂಭಗೊಂಡಿತ್ತು ಎಂಬುದು ಗಮನಾರ್ಹ ಎಂದು ಖೇರಾ ಹೇಳಿದ್ದಾರೆ.
'2012ರಲ್ಲಿ ಅಣ್ಣಾ ಹಜಾರೆ ಚಳವಳಿ ಜೋರಾಗಿ ನಡೆದಿತ್ತು. ಅರವಿಂದ ಕೇಜ್ರಿವಾಲ್ ಸ್ವಂತ ಪಕ್ಷ ರಚಿಸುವ ತಯಾರಿಯಲ್ಲಿದ್ದರು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದರು. ಆಗ ಯುಎಸ್‌ಏಡ್ ನೆರವಿನಿಂದ ಯಾರೆಲ್ಲಾ ಪ್ರಯೋಜನ ಪಡೆದಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
'ತಾವು ಹೆಣೆದಿರುವ ಸುಳ್ಳು ಸಂಕಥನಕ್ಕೆ ಇಂಬು ನೀಡುವುದಕ್ಕಾಗಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ವಿಶ್ವಾಸಾರ್ಹ ನಾಗರಿಕ ಸಮಾಜ ಸಂಘಟನೆಗಳು ಎನ್‌ಜಿಒ ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ' 'ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಛೀಮಾರಿ ಹಾಕುವ ಜೊತೆಗೆ ಸುಳ್ಳು ಹೇಳುವ ಮೂಲಕ ದೇಶದ ದಾರಿ ತಪ್ಪಿಸುತ್ತಿರುವುದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದೂ ಒತ್ತಾಯಿಸಿದ್ದಾರೆ.
'ಮತಪತ್ರ: ಟ್ರಂಪ್ ಮಾತನ್ನು ಮೋದಿ ಪರಿಗಣಿಸಲಿ'
ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸುವ ಬದಲು ಮತಪತ್ರಗಳನ್ನು ಬಳಸಬೇಕು ಎಂಬ ತಮ್ಮ ಮಿತ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶನಿವಾರ ಹೇಳಿದ್ದಾರೆ. 'ಭಾರತದ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತಂತೆ ವ್ಯಕ್ತವಾಗುತ್ತಿರುವ ಕಳವಳಕ್ಕೆ ಪರಿಹಾರ ಸಿಗುವಂತಾಗಲು ಟ್ರಂಪ್ ಮಾತನ್ನು ಮೋದಿ ಗಣನೆಗೆ ತೆಗೆದುಕೊಳ್ಳಬೇಕು' ಎಂದಿದ್ದಾರೆ. 'ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ ಲಕ್ಷದಷ್ಟು ಹೆಚ್ಚಳವಾಗಿರುವುದು ಅಥವಾ ವಿಪಕ್ಷಗಳ ಬೆಂಬಲಿಗರ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದರ ಬಗ್ಗೆ ಮೋದಿ ಅವರ ಮಿತ್ರ ಗಾಬರಿಗೊಳ್ಳುವುದು ನಿಶ್ಚಿತ' ಎಂದೂ ಕುಟುಕಿದ್ದಾರೆ.
-ಪವನ್ ಖೇರಾ, ಕಾಂಗ್ರೆಸ್‌ನ ಮಾಧ್ಯಮ ವಿಭಾಗ ಮುಖಸ್ಥಪ್ರಧಾನಿ ಮೋದಿ ಕೂಡಲೇ ತಮ್ಮ ಮಿತ್ರ ಟ್ರಂಪ್ ಅವರಿಗೆ ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಬೇಕು. ಪ್ರಶ್ನೆ ಮಾಡದೇ ಇದ್ದಲ್ಲಿ ಟ್ರಂಪ್ ಹೇಳಿರುವುದು ನಿಜ ಎಂಬುದು ಸ್ಪಷ್ಟವಾಗುತ್ತದೆ.