ಹೈದರಾಬಾದ್: ತಿರುಮಲ ದೇಗುಲದ ಪ್ರಾವಿತ್ರ್ಯ ಕಾಪಾಡಲು ಮತ್ತು ಭಕ್ತರ ಭಾವನೆ ಗೌರವಿಸಲು 18 ಹಿಂದೂಯೇತರ ಸಿಬ್ಬಂದಿಗೆ ಟಿಟಿಡಿಯು ದೇಗುಲದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿ, ಅವರ ಮೇಲೆ ಶಿಸ್ತುಕ್ರಮ ಆರಂಭಿಸಿದೆ.
ತಿರುಮಲ ವೆಂಕಟೇಶ್ವರನ ಪಾವಿತ್ರ್ಯಕ್ಕೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಹಿಂದೂಯೇತರ ಸಿಬ್ಬಂದಿಗೆ ತಿರುಮಲ ದೇವಸ್ಥಾನದ ಜಾತ್ರೆಗಳು, ಉತ್ಸವಗಳು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿ ಅಂಗೀಕರಿಸಿದ ನಿರ್ಣಯಕ್ಕೆ ಅನುಗುಣವಾಗಿ, ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನದಂತೆ ಫೆ.1ರಂದು ಈ ಬಗ್ಗೆ ತಿಳಿವಳಿಕೆ ಪತ್ರ ನೀಡಿರುವುದು ಬುಧವಾರ ವರದಿಯಾಗಿದೆ.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಅವರು ಹೊರಡಿಸಿರುವ ಆದೇಶದಲ್ಲಿ, 18 ಮಂದಿ ನೌಕರರು ಟಿಟಿಡಿ ಆಯೋಜಿಸುವ ಧಾರ್ಮಿಕ ಉತ್ಸವಗಳು ಮತ್ತು ಮೆರವಣಿಗೆಗಳು ಸೇರಿದಂತೆ ಹಿಂದೂ ಮತ್ತು ಹಿಂದೂಯೇತರ ಚಟುವಟಿಕೆಗಳಲ್ಲಿ ಏಕಕಾಲದಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ, ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಶಿಸ್ತು ಕ್ರಮಕ್ಕೆ ಗುರಿಯಾಗಿರುವ ಹಿಂದೂಯೇತರ ಸಿಬ್ಬಂದಿಯಲ್ಲಿ ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು, ನರ್ಸ್‌ಗಳು ಮತ್ತು ತಿರುಮಲ ಟ್ರಸ್ಟ್ ಬೋರ್ಡ್ ನಡೆಸುವ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಇತರ ಸಿಬ್ಬಂದಿ ಸೇರಿದ್ದಾರೆ. ಆದಾಗ್ಯೂ ಇವರ ವಿರುದ್ಧ ತೆಗೆದುಕೊಳ್ಳುವ ಶಿಸ್ತು ಕ್ರಮ ಮತ್ತು ನೀಡಲಿರುವ ಶಿಕ್ಷೆ ಏನೆಂದು ಪತ್ರದಲ್ಲಿ ಉಲ್ಲೇಖಿಸಿಲ್ಲ.
ಈ ನೌಕರರನ್ನು ಇನ್ನು ಮುಂದೆ ಟಿಟಿಡಿ ದೇವಾಲಯಗಳಲ್ಲಿ ನಡೆಯುವ ಹಿಂದೂ ಆಚರಣೆಗಳು, ಹಬ್ಬಗಳು ಅಥವಾ ಮೆರವಣಿಗೆಗಳಿಗೆ ಸಂಬಂಧಿಸಿದ ಕರ್ತವ್ಯಗಳಿಗೆ ನಿಯೋಜಿಸದಂತೆ ಆಯಾ ವಿಭಾಗಗಳ ಮುಖ್ಯಸ್ಥರಿಗೆ (ಎಚ್‌ಒಡಿಗಳಿಗೆ) ಟಿಟಿಡಿ ಸೂಚನೆ ನೀಡಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಟಿಟಿಡಿ ಮಂಡಳಿ, ಹಿಂದೂಯೇತರ ಸಿಬ್ಬಂದಿ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು.
'ಟಿಟಿಡಿ ಹಿಂದೂ ಧಾರ್ಮಿಕ ಸ್ವಾಯತ್ತ ಸಂಸ್ಥೆಯಾಗಿದೆ. ಹಿಂದೂ ದೇವಸ್ಥಾನದಲ್ಲಿ ಕೆಲಸ ಮಾಡಲು ಟಿಟಿಡಿ ಹಿಂದೂಯೇತರರನ್ನು ನೇಮಿಸಬಾರದು. ಟಿಟಿಡಿಯಲ್ಲಿ ಹಿಂದೂಯೇತರ ಉದ್ಯೋಗಿಗಳು ಎಷ್ಟಿದ್ದಾರೆಂದು ನಾವು ಮೊದಲು ಮಾಹಿತಿ ಸಂಗ್ರಹಿಸುತ್ತೇವೆ. ಮುಂದಿನ ಹಂತದಲ್ಲಿ, ನಾವು ಅವರಿಗೆ ಸ್ವಯಂ ನಿವೃತ್ತಿ ಯೋಜನೆಯ (ವಿಆರ್‌ಎಸ್) ಆಯ್ಕೆ ನೀಡುತ್ತೇವೆ. ಅವರು ಸ್ವಯಂ ನಿವೃತ್ತಿಗೆ ಒಪ್ಪದಿದ್ದರೆ, ನಾವು ಅವರನ್ನು ಆಂಧ್ರ ಪ್ರದೇಶ ಸರ್ಕಾರಕ್ಕೆ ಒಪ್ಪಿಸುತ್ತೇವೆ. ಇವರಿಗೆ ಇತರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಅವಕಾಶವಿದೆ. ಇದರಲ್ಲಿ ನನ್ನ ನಿಲುವು ದೃಢವಾಗಿದೆ' ಎಂದು ಟಿಟಿಡಿ ಅಧ್ಯಕ್ಷರಾದ ಆರಂಭದಲ್ಲೇ ಬಿ.ಆರ್. ನಾಯ್ಡು 'ಪ್ರಜಾವಾಣಿ'ಗೆ ತಿಳಿಸಿದ್ದರು.