ಗುವಾಹಟಿ: 'ಪಾಕಿಸ್ತಾನದ ಪ್ರಜೆ ಅಲಿ ತೌಖೀರ್ ಶೇಖ್ ಈವರೆಗೆ ಭಾರತಕ್ಕೆ 18 ಬಾರಿ ಭೇಟಿ ನೀಡಿದ್ದ ಎಂಬುದು ವಿಶೇಷ ತನಿಖಾ ತಂಡದ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಗುರುವಾರ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರ ಬ್ರಿಟಿಷ್ ಮೂಲದ ಪತ್ನಿ ಜೊತೆಗೂ ಈತನಿಗೆ ಸಂಪರ್ಕ ಇತ್ತು ಎಂದೂ ಆರೋಪಿಸಲಾಗಿದೆ.
'ಆತನಿಗೆ ಆಹ್ವಾನ ನೀಡಿದ್ದವರು ಯಾರು? ಭೇಟಿ ಅವಧಿಯಲ್ಲಿ ಆತಿಥ್ಯ ನೀಡಿದ್ದವರು ಯಾರು ಎಂಬುದು ಗೊತ್ತಾಗಬೇಕಾಗಿದೆ' ಎಂದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, 'ತನಿಖೆಯ ಪ್ರಾಥಮಿಕ ಮಾಹಿತಿಗಳು ಕಾಂಗ್ರೆಸ್‌ಗೆ 'ಪ್ರತಿಕೂಲ'ವಾಗಿವೆ. ಅಸ್ಸಾಂನ ರಾಜಕಾರಣದ ಮೇಲೂ ತೀವ್ರ ಪರಿಣಾಮ ಬೀರಲಿದೆ' ಎಂದರು.
'ಸದನದಲ್ಲಿ ನಿಂತು ಜವಾಬ್ದಾರಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಅಲಿ ಶೇಖ್‌ಗಿರುವ ಸಂಪರ್ಕ ಜಾಲವನ್ನು ನಾವು ಭೇದಿಸುತ್ತೇವೆ. ಮೂರು ತಿಂಗಳಲ್ಲಿ ಈ ಎಲ್ಲ ಮಾಹಿತಿಯನ್ನು ಸದನದ ಎದುರು ಸರ್ಕಾರ ಬಹಿರಂಗಪಡಿಸಲಿದೆ' ಎಂದು ಭರವಸೆ ನೀಡಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಉಪ ನಾಯಕರು ಆದ ಗೊಗೊಯಿ ಅವರ ಪತ್ನಿ ಎಲಿಜಬೆತ್ ಕೊಲ್ಬರ್ನ್ ಅವರಿಗೆ ಪಾಕಿಸ್ತಾನದ ಐಎಸ್‌ಐ ಜೊತೆಗೆ ಸಂಪರ್ಕವಿದೆ ಎಂಬ ಆರೋಪ ಕುರಿತು ಸಿ.ಎಂ ಮತ್ತು ಬಿಜೆಪಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಅಸ್ಸಾಂ ಮತ್ತು ಭಾರತದ ಆಂತರಿಕ ವಿಷಯಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಅಲಿ ತೌಖೀರ್ ಶೇಖ್ ವಿರುದ್ಧದ ಪ್ರಕರಣದ ತನಿಖೆಗಾಗಿ ಅಸ್ಸಾಂ ಪೊಲೀಸ್ ಇಲಾಖೆಯು ಎಸ್‌ಐಟಿ ರಚಿಸಿದೆ.