ನವದೆಹಲಿ: ತನ್ನ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಿಜೆಪಿಗೆ ಹಸ್ತಾಂತರಿಸುವ ಮೂಲಕ ₹18 ಕೋಟಿ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಕೇರಳದ ಕಾಂಗ್ರೆಸ್ ಘಟಕವನ್ನು ನಟಿ, ಉದ್ಯಮಿ ಪ್ರೀತಿ ಜಿಂಟಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರೀತಿ ಜಿಂಟಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ.
ಹಾಗಾಗಿ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್‌ನಿಂದ ₹18 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ಇದರಿಂದಾಗಿ ಕಳೆದ ವಾರ ಬ್ಯಾಂಕ್‌ನ ಆದಾಯ ಕುಸಿದಿದ್ದು, ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಕೇರಳದ ಕಾಂಗ್ರೆಸ್ ಘಟಕ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿತ್ತು.
ಕಾಂಗ್ರೆಸ್ ಆರೋಪಗಳಿಗೆ 'ಎಕ್ಸ್'ನಲ್ಲಿ ತಿರುಗೇಟು ಕೊಟ್ಟಿರುವ ಪ್ರೀತಿ ಜಿಂಟಾ, 'ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಿರ್ವಹಿಸುತ್ತಿದ್ದೇನೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದವರಿಗೆ ನಾಚಿಕೆಯಾಗಬೇಕು. ಯಾರೂ ಕೂಡಾ ನನಗೆ ಏನನ್ನೂ ಅಥವಾ ಯಾವುದೇ ರೀತಿ ಸಾಲವನ್ನು ಮನ್ನಾ ಮಾಡಿಲ್ಲ' ಎಂದು ಕಿಡಿಕಾರಿದ್ದಾರೆ.
'ಒಂದು ರಾಜಕೀಯ ಪಕ್ಷದ ಪ್ರತಿನಿಧಿಯೊಬ್ಬರು ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಕೆಟ್ಟ ಗಾಸಿಪ್‌ಗಳನ್ನು ಹಬ್ಬಿಸುತ್ತಿದ್ದಾರೆ. ಇದರಿಂದ ನನಗೆ ಆಘಾತವಾಗಿದೆ' ಎಂದು ಜಿಂಟಾ ಬೇಸರ ಹೊರಹಾಕಿದ್ದಾರೆ.
10 ವರ್ಷಗಳ ಹಿಂದೆ ಸಾಲವನ್ನು ತೆಗೆದುಕೊಳ್ಳಲಾಗಿತ್ತು. ಬಳಿಕ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆ ಎಂದು ಜಿಂಟಾ ಸ್ಪಷ್ಟಪಡಿಸಿದ್ದಾರೆ.
ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಹಿತೇಶ್ ಮೆಹ್ತಾ ಅವರು ತಮ್ಮ ಅವಧಿಯಲ್ಲಿ ₹122 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಪ್ರೀತಿ ಜಿಂಟಾ ಅವರ ಸಾಲ ಮನ್ನಾ ವಿಚಾರ ಮುನ್ನೆಲೆಗೆ ಬಂದಿದೆ.