ಬಿಜಾಪುರ : ಬಿಜಾಪುರ ಜಿಲ್ಲೆಯ ಮೂರು ಸ್ಥಳಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 18 ನಕ್ಸಲರನ್ನು ಬಂಧಿಸಲಾಗಿದ್ದು, ಅವರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜೆಪರ್ತಿ ಅರಣ್ಯದಲ್ಲಿ ಸ್ಫೋಟಕಗಳ ಸಮೇತ 10 ಮಂದಿ ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪೆಂಟಾ ಅರಣ್ಯದಲ್ಲಿ ಸ್ಫೋಟಕಗಳೊಂದಿಗೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಇದರ ಜೊತೆಗೆ, ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಭೈರಾಮ್‌ಗಢ ಪೊಲೀಸ್ ಠಾಣೆಯ ಜಂಟಿ ಕಾರ್ಯಾಚರಣೆಯಲ್ಲಿ ಸ್ಫೋಟಕ ಸಮೇತ ಒಬ್ಬ ಮಾವೋವಾದಿಯನ್ನು ಬಂಧಿಸಲಾಗಿದೆ.
ಫೆಬ್ರುವರಿ 9ರಂದು ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯದಲ್ಲಿ ಭದ್ರತಾ ಪಡೆಗಳು 31 ನಕ್ಸಲರನ್ನು ಹತ್ಯೆ ಮಾಡಿದ್ದರು.
ಭದ್ರತಾ ಪಡೆಗಳ ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ದಿಕ್ಕಿನಲ್ಲಿ ನಕ್ಸಲರ ವಿರುದ್ಧದ ಈ ಕಾರ್ಯಾಚರಣೆಯು ದೊಡ್ಡ ಯಶಸ್ಸು ಎಂದು ಗೃಹ ಸಚಿವ ಶಾ ಬಣ್ಣಿಸಿದ್ದಾರೆ.