ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳ ತೀವ್ರ ಸ್ಪರ್ಧೆಯಿಂದಾಗಿ ಮೂಲೆ ಗುಂಪಾಗಿದ್ದ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಬರೊಬ್ಬರಿ 18 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಲಾಭ ಕಂಡಿದೆ.
ಹೌದು.. 2007ರ ಬಳಿಕ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ಎಲ್ ಲಾಭಾಂಶ ಕಂಡಿದ್ದು, ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ಗಳಿಸಿದೆ.
ಖಾಸಗಿ ವಲಯದ ಟೆಲಿಕಾಂ ದೈತ್ಯ ಸಂಸ್ಥೆಗಳಾದ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ತಮ್ಮ ದರ ಏರಿಕೆ ಮಾಡಿದ ಬಳಿಕ ಬಿಎಸ್ಎನ್ ಎಲ್ ನತ್ತ ಮರಳುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇದು ಸಂಸ್ಛೆಯ ಲಾಭಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಬಿಎಸ್‌ಎನ್‌ಎಲ್ ಮತ್ತೆ ಮಾರುಕಟ್ಟೆಗೆ ಬಲವಾದ ಪುನರಾಗಮನವನ್ನು ಮಾಡಿದಂತಾಗಿದೆ.
262 ಕೋಟಿ ರೂ. ಲಾಭ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ಎಲ್) ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ಗಳಿಸಿದ್ದು, ಇದು 2007 ರ ನಂತರದ ಮೊದಲ ಲಾಭದಾಯಕತೆಯ ಮರಳುವಿಕೆಯಾಗಿದೆ. ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆ ಮತ್ತು ಕಡಿಮೆ ವೆಚ್ಚದಾಯಕ ಆಪ್ಟಿಮೈಸೇಶನ್ ಕ್ರಮಗಳಿಂದ ನಡೆಸಲ್ಪಟ್ಟ ಗ್ರಾಹಕರ ಸೇರ್ಪಡೆಯಿಂದಾಗಿ ಇದು ಸಂಭವಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‌ಎನ್‌ಎಲ್‌ನ ಸಿಎಂಡಿ ಎ. ರಾಬರ್ಟ್ ಜೆ. ರವಿ ಅವರು, 'ಈ ತ್ರೈಮಾಸಿಕದಲ್ಲಿ ನಮ್ಮ ಆರ್ಥಿಕ ಕಾರ್ಯಕ್ಷಮತೆಯಿಂದ ನಾವು ಸಂತೋಷಗೊಂಡಿದ್ದೇವೆ, ಇದು ನಾವೀನ್ಯತೆ, ಗ್ರಾಹಕ ತೃಪ್ತಿ ಮತ್ತು ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆಯ ಮೇಲಿನ ನಮ್ಮ ಗಮನವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನಗಳೊಂದಿಗೆ, ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ.20% ಮೀರುವ ಆದಾಯದ ಬೆಳವಣಿಗೆ ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ತಿಳಿಸಿದ್ದಾರೆ.