ನವದೆಹಲಿ: ಕಳೆದ ವರ್ಷ 2024 ರಲ್ಲಿ ದೇಶದಲ್ಲಿ ಒಟ್ಟಾರೆ ₹16,966 ಕೋಟಿ ಮೌಲ್ಯದ 1,087 ಟನ್ ಮಾದಕ ಪದಾರ್ಥಗಳು (ಡ್ರಗ್ಸ್) ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳಿಗೆ ಸಂಬಂಧಿಸಿದಂತೆ ಒಟ್ಟು 72,496 ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಭಾನುವಾರ ತಿಳಿಸಿವೆ.
2023ರಲ್ಲಿ ಒಟ್ಟು ₹16,123 ಕೋಟಿ ಮೌಲ್ಯದ ₹1,389 ಟನ್ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟು 1.09 ಲಕ್ಷ ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಿಕೆಯಲ್ಲಿ ಶೇ 22ರಷ್ಟು ಇಳಿಕೆಯಾಗಿದೆ ಎಂದು ಹೇಳಿವೆ.
'ದೇಶದ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಗೆ ಅಗತ್ಯ ಕ್ರಮವಹಿಸಲಾಗಿದೆ' ಎಂದು ಸಿಬಿಐಸಿ ಮುಖ್ಯಸ್ಥ ಸಂಜಯ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.