ನವದೆಹಲಿ: 2024ರಲ್ಲಿ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ವಿವಿಧ ಕಾರಣಗಳಿಗೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವ ರಾಷ್ಟ್ರಗಳ ಕುರಿತು ಅಕ್ಸೆಸ್ ನೌ ವರದಿ ತಯಾರಿಸಿದ್ದು, 2024ರಲ್ಲಿ ಭಾರತದಲ್ಲಿ ಒಟ್ಟು 84 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದೆ.
ಅಲ್ಲದೆ, ಮೊದಲ ಸ್ಥಾನದಲ್ಲಿರುವ ಮ್ಯಾನ್ಮಾರ್‌ನಲ್ಲಿ ಒಟ್ಟು 85 ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
2023ರಲ್ಲಿ ಭಾರತದಲ್ಲಿ ಒಟ್ಟು 116 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಆದೇ ರೀತಿ ಕಳೆದ ಆರು ವರ್ಷಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಿರುವ ದೇಶವಾಗಿ ಭಾರತವನ್ನು ಹೆಸರಿಸದಿರುವುದು ಇದೇ ಮೊದಲು ಎಂದು ವರದಿ ಉಲ್ಲೇಖಿಸಿದೆ.
ಭಾರತದ 16 ರಾಜ್ಯಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಮಣಿಪುರದಲ್ಲಿ ಅತಿ ಹೆಚ್ಚು ಬಾರಿ (21), ಹರಿಯಾಣದಲ್ಲಿ 12 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 12 ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿ 41 ಬಾರಿ ಮತ್ತು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ 23 ಬಾರಿ ಇಂಟರ್‌ನೆಟ್ ನಿರ್ಬಂಧ ವಿಧಿಸಲಾಗಿತ್ತು.
ಕಳೆದ ವರ್ಷ ಸರ್ಕಾರಿ ಉದ್ಯೋಗಗಳಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳೆ ಐದು ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
2024ರಲ್ಲಿ 54 ದೇಶಗಳಲ್ಲಿ ಒಟ್ಟು 296 ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 2023ರಲ್ಲಿ 39 ದೇಶಗಳಲ್ಲಿ 283 ಬಾರಿ ಇಂಟರ್‌ನೆಟ್ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಪಾಕಿಸ್ತಾನ, ರಷ್ಯಾ, ಉಕ್ರೇನ್, ಪ್ಯಾಲೆಸ್ಟೀನ್ ಮತ್ತು ಬಾಂಗ್ಲಾದೇಶ ಸಹಿತ ವಿವಿಧ ರಾಷ್ಟ್ರಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಎಂದು ಅಕ್ಸೆಸ್ ನೌ ಹೇಳಿದೆ.