ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಕ್ಕೆ ಕೇವಲ ಇನ್ನೂ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, 41 ನೇ ದಿನವಾದ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಇಂದು ಅರೈಲ್‌ನಲ್ಲಿರುವ ತ್ರಿವೇಣಿ ಅತಿಥಿ ಗೃಹಕ್ಕೆ ಆಗಮಿಸಿದ ಜೆ. ಪಿ. ನಡ್ಡಾ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ತದನಂತರ ಮಧ್ಯಾಹ್ನ 3 ಗಂಟೆಗೆ ಉಭಯ ನಾಯಕರು ಗಂಗಾ ನದಿಗೆ ಅರ್ಘ್ಯ ಸಲ್ಲಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಡೇ ಹನುಮಾನ್ ದೇವಾಲಯ ಮತ್ತು ಅಕ್ಷಯವತ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶನಿವಾರ ಬೆಳಗ್ಗೆ 8ಗಂಟೆಯವರೆಗೂ ಸುಮಾರು 33. 10 ಲಕ್ಷ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಲ್ಲಿಯವರೆಗೂ ಸುಮಾರು 59. 64 ಕೋಟಿ ಯಾತ್ರಾರ್ಥಿಗಳು ಪುಣ್ಯ ಸ್ನಾನ ಮಾಡುವ ಮೂಲಕ ಇತಿಹಾಸದಲ್ಲಿ ಹೊಸ ದಾಖಲೆ ಮಾಡಲಾಗಿದೆ.
ಜನದಟ್ಟಣೆ ಸವಾಲಿನ ನಡುವೆಯೂ ಭಕ್ತರಿಗೆ ತೊಂದರೆಯಾಗದಂತೆ ಉತ್ತರ ಪ್ರದೇಶ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಕೆಲವೊಂದು ತೊಂದರೆಗಳ ಹೊರತಾಗಿಯೂ ಮಹಾ ಕುಂಭ ಮೇಳ ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಯತ್ನವನ್ನು ಜನರು ಶ್ಲಾಘಿಸಿದ್ದಾರೆ. ಇದೇ 26 ರಂದು ಮಹಾಶಿವರಾತ್ರಿ ದಿನದಂದು ಕುಂಭ ಮೇಳ ಮುಕ್ತಾಯವಾಗಲಿದೆ.