ಭೋಪಾಲ್: ಮುಂದಿನ ಆರ್ಥಿಕ ವರ್ಷದೊಳಗಾಗಿ ಭಾರತೀಯ ರೈಲ್ವೆ ಮಾರ್ಗವು ಶೇ 100ರಷ್ಟು ವಿದ್ಯುತ್ತಿಕರಣಗೊಳ್ಳಲಿದೆ, ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಭಾರಿ ಪ್ರಗತಿ ಸಾಧಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಧ್ಯಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವರ್ಚ್ಯುವಲ್ ಆಗಿ ಭಾಗವಹಿಸಿ, ರಾಜ್ಯ ಹಾಗೂ ರೈಲ್ವೆ ನಡುವಿನ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿ, ಅವರು ಮಾತನಾಡಿದರು.
ಈವರೆಗೆ ಶೇ 97ರಷ್ಟು ರೈಲು ಮಾರ್ಗವನ್ನು ವಿದ್ಯುತ್ತೀಕರಣಗೊಳಿಸಲಾಗಿದೆ. ಆರ್ಥಿಕ ವರ್ಷ 2025-26ರ ವೇಳೆಗೆ ಶೇ 100ರಷ್ಟು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಖರೀದಿ ಬಗ್ಗೆ ಮಾತನಾಡಿದ ಅವರು, ರೈಲ್ವೆಗೆ 1,500 ಮೆಗಾ ವ್ಯಾಟ್ ವಿದ್ಯುತ್ ಖರೀದಿಗೆ ಈಗಾಗಲೇ ನಿರ್ಧರಿಸಲಾಗಿದೆ. ಈ ದಿಸೆಯಲ್ಲಿ ಮಧ್ಯಪ್ರದೇಶದೊಂದಿಗೆ 170 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಒಪ್ಪಂದಕ್ಕೆ ರುಜು ಹಾಕಲಾಗಿದೆ ಎಂದು ಹೇಳಿದ್ದಾರೆ.
ಸರಬರಾಜು ಸ್ಥಿರವಾಗಿದ್ದರೆ, ಮಧ್ಯಪ್ರದೇಶ ಉತ್ಪಾದಿಸುವ ನವೀಕರಿಸಬಹುದಾದ ಯಾವುದೇ ವಿದ್ಯುತ್ ಅನ್ನು ಖರೀದಿಸಲು ರೈಲ್ವೆ ಸಿದ್ಧವಾಗಿದೆ ಎಂದು ಇದೇ ವೇಳೆ ಅವರು ಭರವಸೆ ನೀಡಿದ್ದಾರೆ.
ಒಂದು ವೇಳೆ ಮಧ್ಯಪ್ರದೇಶ ಅಣುವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರೂ ರೈಲ್ವೆ ಅದನ್ನೂ ಖರೀದಿ ಮಾಡಲಿದೆ. ಪವನ ವಿದ್ಯುತ್ ಬಗ್ಗೆಯೂ ರೈಲ್ವೆ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಮಧ್ಯಪ್ರದೇಶದೊಂದಿಗೆ ಮಾಡಿದಂತೆ ಇತರ ರಾಜ್ಯಗಳೊಂದಿಗೂ ಒಪ್ಪಂದಕ್ಕೆ ರೈಲ್ವೆ ಸಿದ್ಧವಿದೆ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ ಮಧ್ಯಪ್ರದೇಶದಕ್ಕೆ ದಾಖಲೆಯ ₹14,745 ಕೋಟಿ ರೈಲ್ವೆ ಬಜೆಟ್ ನೀಡಲಾಗಿದೆ. 2014 ರ ಮೊದಲು, ಮಧ್ಯಪ್ರದೇಶದಲ್ಲಿ ರೈಲ್ವೆ ಮಾರ್ಗಗಳ ನಿರ್ಮಾಣದ ವಾರ್ಷಿಕವಾಗಿ ಕೇವಲ 29-30 ಕಿ.ಮೀ.ಗಳಷ್ಟಿತ್ತು, ಈಗ ಅದು ವರ್ಷಕ್ಕೆ 223 ಕಿ.ಮೀ.ಗಳಿಗೆ ಏರಿದೆ. ಕೆಲಸದ ವೇಗವು 7.5 ಪಟ್ಟು ಹೆಚ್ಚಾಗಿದೆ. ನಿಧಿಯನ್ನು 23 ಪಟ್ಟು ಹೆಚ್ಚಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.