ಪೆರ್ಲ: ಶಿಸ್ತುಬದ್ಧವಾಗಿ ತರಬೇತಿ ನೀಡುವ ಯಕ್ಷಗಾನ ತರಬೇತಿ ಕೇಂದ್ರಗಳು ಹಲವಾರು ಮುಮ್ಮೇಳ ಹಾಗೂ ಹಿಮ್ಮೇಳ ಕಲಾವಿದರನ್ನು ಸಮಾಜಕ್ಕೆ ಧಾರೆಯೆರೆದಿವೆ. ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರವು ಕಳೆದ ಎರಡು ದಶಕಗಳಲ್ಲಿ ಸೃಷ್ಟಿಸಿರುವ ಅನೇಕ ಕಲಾವಿದರು ಯಕ್ಷ ರಂಗದಲ್ಲಿ ಮಿಂಚಿದ್ದಾರೆ. ಹಿರಿಯ ಕಲಾವಿದರ ಕೊಡುಗೆಗಳನ್ನು ಸ್ಮರಿಸುತ್ತಾ, ಅವರು ಹಾಕಿಕೊಟ್ಟ ಬುನಾದಿಯಲ್ಲಿ ಮುನ್ನಡೆದು, ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಈ ಪೀಳಿಗೆಯ ಜವಾಬ್ದಾರಿ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ, ಅಬಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಾಲಾ ಜೀವನದಲ್ಲಿ ಯಕ್ಷಗಾನ ತರಬೇತಿ ಪಡೆದು ಬಳಿಕ ಯಕ್ಷಗಾನ ಕಲೆಯಿಂದ ದೂರ ಸರಿಯುವ ಅಭ್ಯಾಸ, ಯೂ ಟ್ಯೂಬ್ ವೀಡಿಯೋ ನೋಡಿ ಯಕ್ಷಗಾನ ಕಲಿತು ಪ್ರದರ್ಶನ ನೀಡುವ ಪ್ರವೃತ್ತಿ ಕಂಡುಬರುತ್ತಿದೆ. ಇಂತಹ ಕಾಲದಲ್ಲೂ ಪರಂಪರಾಬದ್ಧವಾಗಿ ತರಬೇತಿ ನೀಡುತ್ತಿರುವ ಪೆರ್ಲದ ತರಬೇತಿ ಕೇಂದ್ರ ಯಕ್ಷಗಾನ ಕಲೆಯನ್ನು ಸಮೃದ್ಧವಾಗಿ ಬೆಳೆಸಿದೆ. ಹಿರಿಯ ಕಲಾವಿದರು, ಕಲಾಸಾಧಕರನ್ನು ಗುರುತಿಸಿ ಸನ್ಮಾನಿಸುವ ಸತ್ಸಂಪ್ರದಾಯದ ಕೈಂಕರ್ಯಕ್ಕೆ ಕಲಾಪೆÇೀಷಕರೂ ಕೈ ಜೋಡಿಸುತ್ತಿದ್ದಾರೆ. ಪೆರ್ಲದ ತರಬೇತಿ ಕೇಂದ್ರದ ಮೂಲಕ ಅದೆμÉ್ಟೂೀ ಕಲಾವಿದರು ಮೂಡಿ ಬಂದಿದ್ದಾರೆ. ಇನ್ನಷ್ಟು ಕಲಾವಿದರು ಮೂಡಿ ಬರಲಿ ಎಂದರು.
ಯಕ್ಷಗಾನ ಅಕಾಡಮಿ ಬೆಂಗಳೂರು ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸ್ಥಾಪಕ, ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರ ಯಕ್ಷಗಾನ ತಿರುಗಾಟದ 50ನೇ ವರ್ಷದ ಸವಿನೆನಪಿನಲ್ಲಿ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರು ಹಾಗೂ ಯಕ್ಷಗಾನ ಸಂಘಗಳನ್ನು ಅಭಿನಂದಿಸಲಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕøತ ಪ್ರಸಿದ್ಧ ಯಕ್ಷಗಾನ ಗುರು ಸಂಜೀವ ಸುವರ್ಣ, ಯಕ್ಷಗಾನ ಅಕಾಡಮಿ ಸದಸ್ಯ ಸತೀಶ ಅಡಪ, ಜೇನುಗೂಡು, ಪುತ್ತೂರಿನ ರೇವತಿ ರೈ ನಡುಬೈಲು, ಸತ್ಯ ಶಾಂತಾ ಪ್ರತಿμÁ್ಠನದ ಶಾಂತಾ ಕುಂಟಿನಿ, ನಿವೃತ್ತ ಮುಖ್ಯ ಶಿಕ್ಷಕರು, ಪ್ರಸಿದ್ಧ ಮದ್ದಳೆಗಾರ ಶಂಕರ ಕಾಮತ್ ಚೇವಾರು, ಶಿಕ್ಷಕ, ಪ್ರಸಿದ್ಧ ಯಕ್ಷಗಾನ ಕಲಾವಿದ ದೇವಕಾನ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.
ಕಲಾಪೋಷಕ, ವೈದ್ಯ ಡಾ. ವಿಷ್ಣುಭಟ್ ಬರೆಕರೆ ನೇತೃತ್ವದಲ್ಲಿ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ಹಾಡಲಾಯಿತು. ಸಬ್ಬಣಕೋಡಿ ರಾಮಭಟ್ ಸ್ವಾಗತಿಸಿದರು. ಗಣೇಶ್ ಬೆಂಗಳೂರು ವಂದಿಸಿದರು. ಜ್ಯೋತ್ಸ್ನಾ ಕಡಂದೇಲು ನಿರೂಪಿಸಿದರು.