ಪೇಶಾವರ: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆಯ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ, ಘಟನೆಯಲ್ಲಿ ಐವರು ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ಫೋಟದಲ್ಲಿ ನೌಶೇರಾ ಜಿಲ್ಲೆಯ ಅಕೋರಾ ಖಟ್ಟಕ್ ಪಟ್ಟಣದಲ್ಲಿರುವ ಜಮಿಯತ್ ಉಲೇಮಾ ಇಸ್ಲಾಂ (ಜೆಯುಐ) ಬಣದ ಮುಖ್ಯಸ್ಥ ಮತ್ತು ಮದ್ರಸಾ-ಎ-ಹಕ್ಕಾನಿಯಾದ ಉಸ್ತುವಾರಿ ಹಮೀದುಲ್ ಹಕ್ ಹಕ್ಕಾನಿ ಮೃತಪಟ್ಟಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಶಹಾಬ್ ಅಲಿ ಶಾ ಖಚಿತಪಡಿಸಿದ್ದಾರೆ.
1968ರಲ್ಲಿ ಜನಿಸಿದ ಹಮೀದುಲ್ ಹಕ್, ತಮ್ಮ ತಂದೆ ಮೌಲಾನಾ ಸಮಿ ಉಲ್ ಹಕ್ ಅವರ ಮರಣದ ನಂತರ ಜೆಯುಐನ ಮುಖ್ಯಸ್ಥರಾಗಿದ್ದರು.
ಈ ಸ್ಫೋಟವು ಆತ್ಮಾಹುತಿ ಬಾಂಬ್ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ಹಮೀದುಲ್ ಹಕ್ ಗುರಿಯಾಗಿಸಿದಂತೆ ತೋರುತ್ತಿದೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಐಜಿಪಿ ಜುಲ್ಫಿಕರ್ ಹಮೀದ್ ಹೇಳಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ವೇಳೆ ಸ್ಫೋಟ ಸಂಭವಿಸಿದೆ ಎಂದು ನೌಶೇರಾ ಜಿಲ್ಲೆಯ ಡಿಪಿಒ ಅಬ್ದುರ್ ರಶೀದ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಶೇರಾ ಮತ್ತು ಪೇಶಾವರ ಎರಡೂ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಮತ್ತು ಗವರ್ನರ್ ಫೈಸಲ್ ಕರೀಮ್ ಘಟನೆಯನ್ನು ಖಂಡಿಸಿದ್ದಾರೆ. ಜಮಿಯತ್ ಉಲೇಮಾ-ಎ-ಇಸ್ಲಾಂ ಮುಖಂಡರು ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ .