ಚಂಡೀಗಢ: ಆಡಳಿತ ಸುಧಾರಣಾ ಇಲಾಖೆಯು ಕಳೆದ 21 ತಿಂಗಳಿಂದ ಇಲ್ಲದ ಕಾರಣ, ಅನಿವಾಸಿ ಭಾರತೀಯ (ಎನ್‌ಆರ್‌ಐ) ವ್ಯವಹಾರಗಳ ಇಲಾಖೆಯೊಂದನ್ನೇ ನಾನು ಹೊಂದಿದ್ದೇನೆ ಎಂದು ಪಂಜಾಬ್‌ನ ಸಂಪುಟ ದರ್ಜೆ ಸಚಿವ ಕುಲದೀಪ್ ಸಿಂಗ್ ಧಾಲಿವಾಲ್ ಹೇಳಿದ್ದಾರೆ.
'ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಸಭೆಗಳು ನಡೆದಿಲ್ಲ.
ಇಲಾಖೆಯಲ್ಲಿ ಸಿಬ್ಬಂದಿಯೂ ಇಲ್ಲ ಎಂದು ಹೇಳಿರುವುದಾಗಿ' ಮೂಲಗಳು ತಿಳಿಸಿವೆ.
ಇದನ್ನು ಟೀಕಿಸಿರುವ ಬಿಜೆಪಿ, 'ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ರಾಜ್ಯ ಸರ್ಕಾರದ ಕುರಿತು ಎಷ್ಟು ಜವಾಬ್ದಾರಿಯುತರಾಗಿದ್ದಾರೆ ಎನ್ನುವುದಕ್ಕೆ ಧಾಲಿವಾಲ್ ಅವರ ಸ್ಥಿತಿಯೇ ಸಾಕ್ಷಿ' ಎಂದಿದೆ.
ಪಂಜಾಬ್ ಸರ್ಕಾರವು ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರಗಳಿವೆ. ಆದರೆ ಕುಲದೀಪ್ ಸಿಂಗ್ ಧಾಲಿವಾಲ್ ಅವರಿಗೆ ಹಂಚಿಕೆಯಾಗಿದ್ದ ಆಡಳಿತ ಸುಧಾರಣಾ ಇಲಾಖೆಯ ಉಲ್ಲೇಖವೇ ಇಲ್ಲ. ಈವರೆಗೂ ಈ ಒಂದು ಇಲಾಖೆ ಇದೆ ಎಂಬ ಮಾಹಿತಿ ಸರ್ಕಾರದ ಬಳಿಯೇ ಇಲ್ಲ.
ಧಾಲಿವಾಲ್ ಅವರಿಗೆ ಮೇ 2023ರಂದು ನಡೆದ ಸಂಪುಟ ಪುನಾರಚನೆಯಲ್ಲಿ ಆಡಳಿತ ಸುಧಾರಣಾ ಇಲಾಖೆಯ ಹೊಣೆ ನೀಡಲಾಗಿತ್ತು. ಇದೇ ವೇಳೆ ಅವರು ಈ ಮೊದಲು ಹೊಂದಿದ್ದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಎನ್‌ಆರ್‌ಐ ಇಲಾಖೆಯಿಂದ ಅವರನ್ನು ಕದಲಿಸಿರಲಿಲ್ಲ. ಗುರ್ಮೀತ್ ಸಿಂಗ್ ಖುದ್ದಿಯಾನ್ ಅವರಿಗೆ ನೀಡಲಾಗಿತ್ತು.
ಬಿಜೆಪಿಯ ಪಂಜಾಬ್ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಶ್ ಶರ್ಮಾ ಮಾತನಾಡಿ, 'ಇಲ್ಲದ ಇಲಾಖೆಯ ಸಚಿವ ಸ್ಥಾನವನ್ನು ನೀಡಿದ ಪಂಜಾಬ್‌ನ ಎಎಪಿ ಸರ್ಕಾರದ ಮಾನಸಿಕ ಸ್ಥಿತಿ ಊಹೆಗೂ ಮೀರಿದ್ದು. ಇಲ್ಲದ ಖಾತೆಯನ್ನು ಹಂಚಿದವರು ಹಾಗೂ ಆ ಖಾತೆಯನ್ನು ವಹಿಸಿಕೊಂಡವರಿಗೆ ಅದು ವಾಸ್ತವದಲ್ಲಿ ಇಲ್ಲ ಎಂಬುದೇ ತಿಳಿದಿಲ್ಲ ಎನ್ನುವುದೇ ಪರಮಾಶ್ಚರ್ಯ' ಎಂದಿದ್ದಾರೆ.
ಶಿರೋಮಣಿ ಅಕಾಲಿದಳ ಪಕ್ಷದ ಮುಖಂಡರೂ ಆದ ಭಟಿಂಡಾ ಸಂಸದ ಹರ್ಸಿರ್ಮತ್ ಕೌರ್ ಬಾದಲ್ ಅವರೂ ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ.
'ಇದು ಪಂಜಾಬ್‌ನ ಎಎಪಿ ಸರ್ಕಾರದ ಶೈಲಿ. ಅಸ್ತಿತ್ವದಲ್ಲೇ ಇಲ್ಲದ ಇಲಾಖೆಯನ್ನು ಸರ್ಕಾರ ಹಂಚಿದೆ. ತಮಗೆ ಹಂಚಿಕೆಯಾದ ಇಲಾಖೆ ಕುರಿತು ಸಚಿವರಿಗೆ ಕನಿಷ್ಠ ಕಾಳಜಿಯೂ ಇಲ್ಲವಾಗಿದೆ. ಇವೆಲ್ಲಾ ಏಕಾಗಿದೆ ಎಂದರೆ, ಪಂಜಾಬ್‌ನಲ್ಲಿ ಸರ್ಕಾರವೇ ಇಲ್ಲ. ಇಲ್ಲಿರುವ ಸರ್ಕಾರದ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿದೆ' ಎಂದಿದ್ದಾರೆ.
'ಎಂಥಾ ಬದಲಾವಣೆ' ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ಹಾಗೂ ಲೂಧಿಯಾನ ಸಂಸದ ಅಮರೀಂದರ್ ಸಿಂಗ್ ರಾಜಾ ಅವರು ಎಎಪಿ ಕಾಲೆಳೆದಿದ್ದಾರೆ.