ಕಾಸರಗೋಡು: ಆನ್‍ಲೈನ್ ಟ್ರೇಡಿಂಗ್ ಹೆಸರಲ್ಲಿ ಕಾಸರಗೋಡಿನ ವೈದ್ಯರೊಬ್ಬರಿಂದ 2.23ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪಯ್ಯನ್ನೂರು ಕವ್ವಾಯಿ ನಿವಾಸಿ ಎ.ಟಿ ಮಹಮ್ಮದ್ ನೌಶಾದ್ ಎಂಬಾತನನ್ನು ಕಾಸರಗೋಡು ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಉತ್ತಮ್‍ದಾಸ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ನಿರ್ದೇಶ ಪ್ರಕಾರ ಕಾರ್ಯಾಚರಣೆ ನಡೆಸಲಾಗಿದೆ. ಮುಂಬೈ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಎರ್ನಾಕುಳಂ ನಿವಾಸಿಯೊಬ್ಬರಿಗೆ ವಿಡಿಯೋ ಕಾಳ್ ಮಾಡಿ ಬೆದರಿಸಿ ಹಣ ಎಗರಿಸಿದ ಪ್ರಕರಣದಲ್ಲಿ ಪೊಲೀಸರು ಹುಡುಕಾಡುವ ಮಧ್ಯೆ ಕಾಸರಗೋಡಿನ ಪೊಲೀಸರ ಅತಿಥಿಯಾಘಿದ್ದಾನೆ. ಈತ ಉತ್ತರ ಭಾರತದ ಸೈಬರ್ ವಂಚನಾ ತಮಡದೊಂದಿಗೆ ಸಂಪರ್ಕ ಹೊಂದಿರುವುದಲ್ಲದೆ, ವಿದೇಶಿ ವಂಚಕರ ಸಂಪರ್ಕವನ್ನೂ ಹೊಂದಿರುವುದಾಗಿ ಮಾಹಿತಿಯಿದೆ. ಸ್ವಂತ ಹೆಸರಲ್ಲಿ ಬ್ಯಾಂಕ್ ಖಾತೆ ಹೊಂದಿರದ ಈತ, ಇನ್ನೊಬ್ಬರ ಖಾತೆಯ ಮೂಲಕ ತನ್ನ ಆರ್ಥಿಕ ವ್ಯವಹಾರ ನಡೆಸುತ್ತಿದ್ದನೆನ್ನಲಾಗಿದೆ.