ಕರಾಚಿ: ಶಿಕ್ಷೆ ಅವಧಿ ಪೂರ್ಣಗೊಳಿಸಿರುವ 22 ಭಾರತೀಯ ಮೀನುಗಾರರು ಕರಾಚಿಯ ಮರಾಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ವರದಿಯಾಗಿದೆ.
'ಮೀನುಗಾರರನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು, ಶನಿವಾರ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ' ಎಂದು ಮಲಿರ್ ಜೈಲಿನ ಸೂಪರಿಂಟೆಂಡೆಂಟ್ ಅರ್ಷದ್ ಶಾ ಅವರನ್ನು ಉಲ್ಲೇಖಿಸಿ 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
'ಈಧಿ ಫೌಂಡೇಶನ್'ನ ಅಧ್ಯಕ್ಷ ಫೈಸಲ್ ಈಧಿ ಅವರು ಮೀನುಗಾರರು ಲಾಹೋರ್‌ಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಂದ ಮೀನುಗಾರರು ಭಾರತಕ್ಕೆ ಹಿಂದಿರುಗಲಿದ್ದಾರೆ. ಲಾಹೋರ್‌ವರೆಗಿನ ಪ್ರಯಾಣ ವೆಚ್ಚವನ್ನು ಈಧಿ ಫೌಂಡೇಶನ್ ಭರಿಸಲಿದೆ.
ಲಾಹೋರ್‌ನ ವಾಘಾ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸುವ ಮೀನುಗಾರರು ಅಧಿಕೃತ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಸ್ಥಳಗಳಿಗೆ ಮರಳಲಿದ್ದಾರೆ.
ಜನವರಿ 1ರಂದು ಉಭಯ ದೇಶಗಳ ನಡುವೆ ವಿನಿಮಯವಾದ ಕೈದಿಗಳ ಪಟ್ಟಿಗಳ ಪ್ರಕಾರ, ಪಾಕಿಸ್ತಾನದ ಜೈಲಿನಲ್ಲಿ 266 ಭಾರತೀಯ ಕೈದಿಗಳಿದ್ದರೆ(49 ನಾಗರಿಕ ಕೈದಿಗಳು ಮತ್ತು 217 ಮೀನುಗಾರರು), ಭಾರತದ ಜೈಲಿನಲ್ಲಿ 462 ಪಾಕಿಸ್ತಾನಿ ಕೈದಿಗಳು (381 ನಾಗರಿಕ ಕೈದಿಗಳು ಮತ್ತು 81 ಮೀನುಗಾರರು) ಇದ್ದಾರೆ.