ಲಖನೌ: ಲೋಕಸಭೆಯ ಮಾಜಿ ಸಂಸದ ಉದಿತ್ ರಾಜ್ ಅವರು ಕಾಂಗ್ರೆಸ್ ಮತ್ತು ಬಿಜೆಪಿಯ 'ಹೊಗಳುಭಟ್ಟ' ಇದ್ದಂತೆ ಎಂದು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರ ಸೋದರಳಿಯ ಆಕಾಶ್ ಆನಂದ್ ವಾಗ್ದಾಳಿ ನಡೆಸಿದ್ದಾರೆ.
'ಉದಿತ್ ರಾಜ್ ಅವರು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿಯ ಕತ್ತು ಹಿಸುಕಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಕೂಡಲೇ ಅವರ ವಿರುದ್ಧ 24 ಗಂಟೆಯೊಳಗಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶದಾದ್ಯಂತ ಇರುವ ನಮ್ಮ ಪಕ್ಷದ ಯುವಕರು ಸುಮ್ಮನಿರುವುದಿಲ್ಲ. ಅವರಿಗೆ ಹೇಗೆ ಪಾಠ ಕಲಿಸಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ' ಎಂದು ಆಕಾಶ್ ಆನಂದ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಮಾಯಾವತಿ ಅವರು ಸಾಮಾಜಿಕ ಚಳುವಳಿಯ ಕತ್ತು ಹಿಸುಕಿದ್ದಾರೆ. ಇದೀಗ ಅವರ ಕತ್ತು ಹಿಸುಕುವ ಸಮಯ ಬಂದಿದೆ' ಎಂದು ಉದಿತ್ ರಾಜ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದರು.
ಉದಿತ್ ರಾಜ್ ಹೇಳಿಕೆಗೆ ತಿರುಗೇಟು ನೀಡಿರುವ ಆನಂದ್, 'ಮಾಯಾವತಿ ಅವರು ಬಹುಜನ ಚಳುವಳಿಯ ಬಗ್ಗೆ ಕಾಳಜಿ ಹೊಂದಿದ್ದಾರೆ. ಆದ್ದರಿಂದ ಅವರು ಯಾವುದೋ ಪಕ್ಷದ ಚಮಚಾಗಿರಿ ಮಾಡುವ ಮೂಲಕ ಸಂಸದ ಅಥವಾ ಶಾಸಕರಾಗಿಲ್ಲ' ಎಂದು ಗುಡುಗಿದ್ದಾರೆ.
'ನಾನು ಬಹುಜನ ಮಿಷನ್‌ನ ಯುವ ಸೈನಿಕನಾಗಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವರ್ ಕಾನ್ಶಿರಾಮ್ ಸಾಹೇಬರ ಧ್ಯೇಯವನ್ನು ಉದಿತ್ ರಾಜ್ ಅವರಿಗಿಂತ ಹೆಚ್ಚು ಅರ್ಥಮಾಡಿಕೊಂಡಿದ್ದೇನೆ. ಬೆದರಿಕೆಗಳಿಗೆ ನಾವು ಎದುರುವುದಿಲ್ಲ' ಎಂದು ಆನಂದ್ ಹೇಳಿದ್ದಾರೆ.