HEALTH TIPS

26/11ರ ದಾಳಿಯ ಅರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ: ಅಮೆರಿಕ

ವಾಷಿಂಗ್ಟನ್‌: ಮುಂಬೈನಲ್ಲಿ ನಡೆದಿದ್ದ 26/11ರ ಭಯೋತ್ಪಾದಕರ ದಾಳಿ ಕೃತ್ಯದ ಅರೋಪಿ ತಹವ್ವುರ್ ರಾಣಾ ಶರಣಾಗತಿ ಮತ್ತು ಆತನನ್ನು ತನ್ನ ವಶಕ್ಕೆ ಪಡೆಯಲು ಭಾರತ ಎಲ್ಲ ಅಗತ್ಯ ಕ್ರಮವಹಿಸಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.

'ಕಾನೂನು ಕ್ರಮ ಎದುರಿಸಲು, ರಾಣಾನನ್ನು ಭಾರತದ ವಶಕ್ಕೆ ಒಪ್ಪಿಸಲು ನನ್ನ ಸರ್ಕಾರ ಅನುಮೋದನೆ ನೀಡಿದೆ' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೇಳಿಕೆಯ ಹಿಂದೆಯೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಈ ಹೇಳಿಕೆ ನೀಡಿದ್ದಾರೆ.

'ಅಮೆರಿಕ ಸರ್ಕಾರ ಸ್ಪಷ್ಟ ನಿಲುವು ತಳೆದಿರುವ ಪ್ರಕರಣ ಇದು. ಶ್ವೇತಭವನದಲ್ಲಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ನೀವೂ ಗಮನಿದ್ದೀರಿ. ಆರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ ವಹಿಸಲಾಗುತ್ತಿದೆ' ಎಂದು ಮಿಸ್ರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಶಕ್ಕೆ ಪಡೆಯಲು ಕಾಲಮಿತಿ ಗೊತ್ತು ಪಡಿಸಲಾಗಿದೆಯೇ ಎಂಬ ಪ್ರಶ್ನೆಗೆ, 'ಈ ಕುರಿತು ಯತ್ನಗಳು ನಡೆದಿವೆ. ಅಂತಿಮ ಹಂತದ ಕೆಲ ವಿಧಿಗಳು ಚಾಲ್ತಿಯಲ್ಲಿವೆ' ಎಂದರು.

ತಹವ್ವುರ್‌ ರಾಣಾ ಪಾಕಿಸ್ತಾನ ಮೂಲದವನಾಗಿದ್ದು, ಕೆನಡಾ ಪ್ರಜೆಯಾಗಿದ್ದಾನೆ. ಪ್ರಸ್ತುತ, ಲಾಸ್‌ ಏಂಜಲಿಸ್‌ನ ಜೈಲಿನಲ್ಲಿ ಇದ್ದಾನೆ. ಪಾಕ್‌ ಮೂಲದ ಅಮೆರಿಕ ಪ್ರಜೆ ಡೇವಿಡ್‌ ಕೋಲ್ಮನ್‌ ಹೆಡ್ಲಿ ಸಹಚರನಾದ ಈತ 26/11 ಕೃತ್ಯದ ಪ್ರಮುಖ ಸಂಚುಕಾರನಾಗಿದ್ದಾನೆ.

ತನ್ನನ್ನು ಭಾರತದ ವಶಕ್ಕೆ ಒಪ್ಪಿಸುವುದನ್ನು ಪ್ರಶ್ನಿಸಿ ರಾಣಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಜನವರಿ 21ರಂದು ವಜಾ ಮಾಡಿತ್ತು.

2008ರ ನ. 26ರಂದು 10 ಪಾಕಿಸ್ತಾನಿ ಉಗ್ರರ ತಂಡ ಮುಂಬೈಗೆ ನುಸುಳಿ ರೈಲು ನಿಲ್ದಾಣ, ಎರಡು ತಾರಾ ಹೋಟೆಲ್‌ಗಳಲ್ಲಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯನ್ನು ತಡೆಯುವ ಕಾರ್ಯಾಚರಣೆ 60 ಗಂಟೆ ನಡೆದಿತ್ತು. 166 ಮಂದಿ ಮೃತಪಟ್ಟಿದ್ದರು.

ಕಾರ್ಯಾಚರಣೆಯಲ್ಲಿ ಉಗ್ರರೂ ಹತರಾಗಿದ್ದರು. ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್‌ ಅಮಿರ್ ಕಸಬ್‌ ನನ್ನು ವಿಚಾರಣೆ ಬಳಿಕ 2012ರ ನವೆಂಬರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಮುಂಬೈ ಜೈಲು ಸಿದ್ಧವಾಗಿದೆ: ಫಡಣವೀಸ್

ಮುಂಬೈ: 'ರಾಣಾ ಇರಿಸಲು ಮುಂಬೈನ ಜೈಲು ಸಿದ್ಧವಾಗಿದೆ. 26/11 ಕೃತ್ಯದಲ್ಲಿ ಹುತಾತ್ಮರಾದವರು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಲಿದೆ' ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ. ರಾಣಾ ಹಸ್ತಾಂತರಿಸಲು ಅಮೆರಿಕ ಸರ್ಕಾರ ಒಪ್ಪಿರುವುದು ಪ್ರಮುಖ ಬೆಳವಣಿಗೆ. ಈ ಬಗ್ಗೆ ಕ್ರಮವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಂಬೈನ ಜೈಲಿನಲ್ಲಿ ಭದ್ರತೆ ಕುರಿತ ಪ್ರಶ್ನೆಗೆ ಅವರು 'ಅದು ಸಮಸ್ಯೆಯೇ ಅಲ್ಲ. ಇಲ್ಲೇ ಕಸಬ್‌ ಇಡಲಾಗಿತ್ತು' ಎಂದರು.

'26/11ಕ್ಕೆ ಮುನ್ನ ಮುಂಬೈಗೂ ಭೇಟಿ ನೀಡಿದ್ದ...'

  • ಮುಂಬೈ ದಾಳಿ ಕೃತ್ಯದ ಸಂಚುಕೋರ ತಹವ್ವುರ್ ಹುಸೇನ್‌ ರಾಣಾ

  • 1961ರ ಜನವರಿ 12ರಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಚಿಕವತ್ನಿಯಲ್ಲಿ ಜನಿಸಿದ್ದ.

  • ವೃತ್ತಿಯಿಂದ ವೈದ್ಯನಾಗಿದ್ದ ಆತ ಪಾಕ್‌ ಸೇನೆಯ ಆರೋಗ್ಯ ಶಿಬಿರಗಳಲ್ಲಿ ಕ್ಯಾಪ್ಟನ್‌ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ.

  • ಈತನ ಪತ್ನಿ ಕೂಡಾ ವೈದ್ಯೆ 1997ರಲ್ಲಿ ಕೆನಡಾಗೆ ವಲಸೆ ಹೋಗಿದ್ದ ಈತ ಅಲ್ಲಿತ ಪೌರತ್ವ ಪಡೆದಿದ್ದ. ಷಿಕಾಗೊದಲ್ಲಿ ವಲಸಿಗ ಸೇವೆ ಏಜೆನ್ಸಿ ನಡೆಸುತ್ತಿದ್ದು ನ್ಯೂಯಾರ್ಕ್ ಟೊರಾಂಟೊದಲ್ಲೂ ಕಚೇರಿ ಹೊಂದಿದ್ದಾನೆ.

  • ರಾಣಾ ತನ್ನ ಸಹಚರ ಹೆಡ್ಲಿ ಜೊತೆಗೂಡಿ ಲಷ್ಕರ್ ಎ ತೊಯಬಾ ಸಂಘಟನೆ ಪಾಕ್‌ನಲ್ಲಿ ನಡೆಸುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದ.

  • 2009ರ ಅಕ್ಟೋಬರ್ 18ರಂದು ರಾಣಾ ಹೆಡ್ಲಿಯನ್ನು ಜೈಲ್ಯಾಂಡ್ಸ್‌ ಪಾಸ್ಟನ್‌ ದೈನಿಕದ ಕಚೇರಿ ಮೇಲಿನ ದಾಳಿ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.

  • ಮುಂಬೈಗೆ ಭೇಟಿ ನೀಡಿದ್ದಾಗ ತಾಜ್‌ ಮಹಲ್‌ ಹೋಟೆಲ್‌ನಲ್ಲಿ ನೆಲಸಿದ್ದ. 26/11ರಂದು ಈ ಹೋಟೆಲ್‌ನ ಮೇಲೂ ಉಗ್ರರು ದಾಳಿ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries