ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ಹುಸ್ಸೈನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮೋದನೆ ನೀಡಿದೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ. ರಾಣಾ ಭಾರತಕ್ಕೆ ಗಡೀಪಾರಾಗುವುದರಿಂದ ಆತ, ಕೃತ್ಯವೆಸಗುವುದಕ್ಕೂ ಮುನ್ನ ಭಾರತದ ಉತ್ತರ ಹಾಗೂ ದಕ್ಷಿಣ ಭಾಗಗಳಿಗೆ ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಹಾಗೂ ಪಾಕಿಸ್ತಾನ-ಅಮೆರಿಕನ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ನಂಟು ಹೊಂದಿರುವ 64 ವರ್ಷದ ರಾಣಾ, ಸದ್ಯ ಲಾಸ್ ಏಂಜಲೀಸ್‌ನ ಮೆಟ್ರೊಪಾಲಿಟನ್ ಬಂಧನ ಕೇಂದ್ರದಲ್ಲಿದ್ದಾನೆ.
ರಾಣಾನನ್ನು 'ಜಗತ್ತಿನ ಅತಿ ದುಷ್ಟರಲ್ಲಿ ಒಬ್ಬ' ಎಂದು ಉಲ್ಲೇಖಿಸಿರುವ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್, ಆತನನ್ನು ಭಾರತಕ್ಕೆ ಹಸ್ತಾಂತರಲಿಸಲು ಅನುಮೋದನೆ ನೀಡಿರುವುದಾಗಿ ಎಂದು ಕಳೆದವಾರ ಘೋಷಿಸಿದ್ದರು.
ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡರೆ, ಆತನ ವಿಚಾರಣೆ ಆರಂಭವಾಗಲಿದೆ. ಇದರೊಂದಿಗೆ, ಮುಂಬೈ ದಾಳಿ ಸಂಬಂಧ ಅಜ್ಮಲ್ ಅಮೀರ್ ಕಸಬ್ ಹಾಗೂ ಜಬಿಯುದ್ದೀನ್ ಅಲಿ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಬಳಿಕ ವಿಚಾರಣೆಗೆ ಒಳಪಡುವ ಮೂರನೇ ಆರೋಪಿಯಾಗಲಿದ್ದಾನೆ.
ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರಬ್ಬೀ ಸಮುದ್ರದ ಮೂಲಕ 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿತ್ತು. ನಗರದ ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಹಾಗೂ ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿ ದೇಶದಾದ್ಯಂತ ತಲ್ಲಣ ಸೃಷ್ಟಿಸಿತ್ತು. ಏಕಾಏಕಿ ನಡೆದ ಗುಂಡಿನಲ್ಲಿ ದಾಳಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.
ಮುಂಬೈ ದಾಳಿಯ ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸಮ್ಮತಿ26/11ರ ದಾಳಿಯ ಅರೋಪಿ ರಾಣಾ ವಶಕ್ಕೆ ಪಡೆಯಲು ಅಗತ್ಯ ಕ್ರಮ: ಅಮೆರಿಕ
ದಾಳಿಯಲ್ಲಿ ಭಾಗಿಯಾಗಿದ್ದ 10 ಬಂದೂಕುಧಾರಿಗಳ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತಿ ದಾಳಿ ವೇಳೆ ಹತ್ಯೆಯಾಗಿದ್ದರು. ಸೆರೆಯಾಗಿದ್ದ ಒಬ್ಬ ಉಗ್ರ ಮೊಹಮ್ಮದ್ ಅಜ್ಮಲ್ ಕಸಬ್‌ಗೆ 2010ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆತನನ್ನು, 2012ರಲ್ಲಿ ಪುಣೆಯ ಯೆರವಾಡಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ರಾಣಾನನ್ನು ಎಫ್‌ಬಿಐ ಅಧಿಕಾರಿಗಳು, 2009ರ ಅಕ್ಟೋಬರ್ 27ರಂದು ಬಂಧಿಸಿದ್ದರು.
ಭಾರತದಲ್ಲಿ ಹೆಡ್ಲಿಯ ಚಟುವಟಿಕೆಗಳ ಕುರಿತು ತನಿಖೆ ನಡೆಸುತ್ತಿದ್ದ ವೇಳೆ, ರಾಣಾ ತನ್ನ ಪತ್ನಿ ಸಮ್ರಾಜ್ ರಾಣಾ ಅಖ್ತರ್ ಜೊತೆ 2008ರ ನವೆಂಬರ್ 13 ಹಾಗೂ 21ರ ನಡುವೆ ಹಾಪುರ್, ದೆಹಲಿ, ಆಗ್ರಾ, ಕೊಚ್ಚಿ, ಅಹಮದಾಬಾದ್ ಹಾಗೂ ಮುಂಬೈಗೆ ಭೇಟಿ ನೀಡಿದ್ದ ಎಂಬುದು ತಿಳಿದುಬಂದಿತ್ತು. ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಆತನ ವಿರುದ್ಧ 2011ರಲ್ಲಿ ಆರೋಪಟ್ಟಿ ಸಲ್ಲಿಸಿತ್ತು.
ಹಸ್ತಾಂತರ ಪೂರ್ಣಗೊಳ್ಳಬೇಕಿದೆ. ನಂತರ, ಮುಂಬೈ ದಾಳಿಗೂ ಮುನ್ನ ಭಾರತದ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದರ ಉದ್ದೇಶವೇನು ಎಂಬ ಬಗ್ಗೆ ರಾಣಾನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.