ಜೈಪುರ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮಹಿಳಾ ಪವರ್ ಲಿಫ್ಟರ್ ಅಭ್ಯಾಸದ ವೇಳೆ 270 ಕೆ.ಜಿ ತೂಕದ ರಾಡ್ ಕುತ್ತಿಗೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪವರ್ ಲಿಫ್ಟರ್ ಯಾಷ್ಟಿಕಾ ಆಚಾರ್ಯ (17) ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ 270 ಕೆ.ಜಿ ತೂಕದ ರಾಡ್ ಬಿದ್ದು ಕುತ್ತಿಗೆ ಮುರಿದಿದೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ನಯಾ ಶಹರ್ ಎಸ್‌ಎಚ್‌ಒ ವಿಕ್ರಮ್ ತಿವಾರಿ ಹೇಳಿದ್ದಾರೆ.
ಯಾಷ್ಟಿಕಾ ಜಿಮ್‌ನಲ್ಲಿ ಭಾರ ಎತ್ತುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದುರಂತದಲ್ಲಿ ತರಬೇತುದಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿವಾರಿ ವಿವರಿಸಿದ್ದಾರೆ.
ಘಟನೆ ಸಂಬಂಧ ಯಾಷ್ಟಿಕಾ ಕುಟುಂಬದವರು ಯಾವುದೇ ಪ್ರಕರಣ ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.