ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಅಮೆರಿಕ ಪ್ರವಾಸ ಅಂತ್ಯವಾಗಿದೆ. ಅಮೆರಿಕ ಭೇಟಿ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಂತ್ರಜ್ಞಾನ, ರಕ್ಷಣೆ, ಭದ್ರತೆ, ಇಂಧನ ಸೇರಿ ಹಲವು ವಿಷಯಗಳ ಬಗ್ಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಫ್ರಾನ್ಸ್‌ನಿಂದ ಬುಧವಾರ ಅಮೆರಿಕಕ್ಕೆ ಆಗಮಿಸಿದ ಮೋದಿ, ಗುರುವಾರ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎರಡನೇ ಅವಧಿಗೆ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ನಾಯಕರ ಮೊದಲ ಭೇಟಿ ಇದಾಗಿತ್ತು.
ಉಭಯ ನಾಯಕರು ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಭೇಟಿ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, 'ಟ್ರಂಪ್ ಅವರ ಜೊತೆಗಿನ ಭೇಟಿ ಅತ್ಯುತ್ತಮವಾಗಿತ್ತು. ಈ ಮಾತುಕತೆ ಭಾರತ ಹಾಗೂ ಅಮೆರಿಕ ನಡುವಣ ಸ್ನೇಹಕ್ಕೆ ಮತ್ತಷ್ಟು ವೇಗ ತುಂಬಲಿದೆ' ಎಂದು ಹೇಳಿದ್ದಾರೆ.
'ಟ್ರಂಪ್ ಅವರು ಮತ್ತೆ ಅಮೆರಿಕವನ್ನು ಶ್ರೇಷ್ಠವಾಗಿಸುವ ಬಗ್ಗೆ ಮಾತನಾಡುತ್ತಾರೆ. ನಾವು ವಿಕಸಿತ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಉಭಯ ರಾಷ್ಟ್ರಗಳು ಅಭಿವೃದ್ಧಿಗಾಗಿ ದೊಡ್ಡ ಪಾಲುದಾರಿಕೆ ಹೊಂದಿವೆ' ಎಂದು ಮೋದಿ ಹೇಳಿದ್ದಾರೆ.
ಭಾರತದೊಂದಿಗೆ ವ್ಯಾಪಾರ ಅಭಿವೃದ್ಧಿ, ರಕ್ಷಣಾ ಪಾಲುದಾರಿಕೆಯ ಬಗ್ಗೆಯೂ ಟ್ರಂಪ್ ಘೋಷಣೆ ಮಾಡಿದರು. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರನ್ನೂ ಪ್ರಧಾನಿ ಭೇಟಿ ಮಾಡಿದರು.
'ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ತೆರಳಿದ್ದ ಪ‍್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಫಲಪ್ರದವಾಗಿತ್ತು' ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಎರಡು ದಿನಗಳ ಪ್ರವಾದ ವೇಳೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ವಾಲ್ಟ್ಸ್ ಹಾಗೂ ರಾಷ್ಟ್ರೀಯ ಗುಪ್ತದಳದ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಮೋದಿ ಭೇಟಿ ಮಾಡಿದರು.