ನವದೆಹಲಿ: ತಮಿಳುನಾಡು ವಿಧಾನಸಭೆಯು ಅಂಗೀಕಾರ ನೀಡಿರುವ ಮಸೂದೆಗಳಿಗೆ ರಾಜ್ಯಪಾಲ ಆರ್.ಎನ್. ರವಿ ಅವರು ಎರಡನೆಯ ಬಾರಿಯೂ ಅಂಕಿತ ಹಾಕದೆ ಇರುವುದು ದೇಶದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ವಿಫಲವಾಗುವುದಕ್ಕೆ ಕಾರಣವಾಗುತ್ತದೆ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿವರಿಸಿದೆ.
ವಿಧಾನಸಭೆಯು ಅಂಗೀಕಾರ ನೀಡಿದ ಮಸೂದೆಗಳಿಗೆ ರಾಜ್ಯಪಾಲರ ಅಂಕಿತದ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ನಡೆಸುತ್ತಿದೆ.
ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಂಘರ್ಷದ ಕಾರಣದಿಂದಾಗಿ ರಾಜ್ಯದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪೀಠ ಹೇಳಿದೆ.
ಸರ್ಕಾರದ ಪರವಾಗಿ ಮಂಗಳವಾರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ವಿಧಾನಸಭೆಯು ಮಸೂದೆಯನ್ನು ಅಂಗೀಕರಿಸಿದಾಗ ರಾಜ್ಯಪಾಲರು ಅದನ್ನು ಪುನರ್ ಪರಿಶೀಲಿಸುವಂತೆ ಮಾತ್ರ ಸೂಚಿಸಬಹುದು ಎಂದು ತಿಳಿಸಿದ್ದರು.
'ಆದರೆ, ಅದೇ ಮಸೂದೆಗೆ ಮತ್ತೊಮ್ಮೆ ಅಂಗೀಕಾರ ನೀಡಿ ರಾಜ್ಯಪಾಲರಿಗೆ ರವಾನಿಸಿದಾಗ, ಅದಕ್ಕೆ ಅಂಕಿತ ಹಾಕದೆ ಬೇರೆ ಆಯ್ಕೆ ರಾಜ್ಯಪಾಲರಿಗೆ ಇಲ್ಲ. ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ ಹೇಳಿರುವ ಪ್ರಕ್ರಿಯೆ ಇದು. ಎರಡನೆಯ ಬಾರಿ ಮಸೂದೆಯನ್ನು ಕಳುಹಿಸಿದಾಗಲೂ ಅವರು ಅಂಕಿತ ಹಾಕದೆ ಇದ್ದರೆ, ಅದು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ವೈಫಲ್ಯವಾಗುತ್ತದೆ' ಎಂದು ರೋಹಟಗಿ ವಾದಿಸಿದ್ದರು.
ಮಸೂದೆಯನ್ನು ರಾಷ್ಟ್ರಪತಿಯವರ ಸಹಿಗೆ ಕಳುಹಿಸುವುದಿದ್ದರೆ ಅದನ್ನು ಮೊದಲ ಬಾರಿಗೇ ಮಾಡಬೇಕು. ಆ ಕೆಲಸವನ್ನು ನಂತರದಲ್ಲಿ ಮಾಡಲು ಅವಕಾಶ ಇಲ್ಲ ಎಂದು ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದಿಸಿದರು.
ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಮಸೂದೆಗಳಿಗೆ ಸಹಿ ಹಾಕುವುದನ್ನು ರಾಜ್ಯಪಾಲ ರವಿ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿ ಸರ್ಕಾರವು 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ರಾಜ್ಯಪಾಲರು ಹಿಂದಿರುಗಿಸಿದ 10 ಮಸೂದೆಗಳನ್ನು ತಮಿಳುನಾಡು ವಿಧಾನಸಭೆಯು ಮತ್ತೆ ಅಂಗೀಕರಿಸಿದೆ.
ವಿಧಾನಸಭೆಯು ಎರಡನೆಯ ಬಾರಿ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು, ರಾಷ್ಟ್ರಪತಿಯವರ ಅಂಕಿತಕ್ಕೆ ರವಾನಿಸಬಹುದೇ ಎಂಬುದು ಮುಖ್ಯವಾದ ಪ್ರಶ್ನೆ ಎಂದು ಸರ್ಕಾರವು ಕೋರ್ಟ್‌ಗೆ ಹೇಳಿದೆ.