ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 112 ಭಾರತೀಯರನ್ನು ಹೊತ್ತ ಅಮೆರಿಕದ ಸೇನಾ ವಿಮಾನವು ಭಾನುವಾರ ತಡರಾತ್ರಿ ಅಮೃತಸರಕ್ಕೆ ಬಂದಿಳಿದಿದೆ.
ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದ ಭಾಗವಾಗಿ ಈ ಪ್ರಕ್ರಿಯೆ ನಡೆದಿದ್ದು, ಅಮೆರಿಕದಿಂದ ವಾಪಸಾದ ಭಾರತೀಯರ ಮೂರನೇ ತಂಡ ಇದಾಗಿದೆ.
ಅ-17 ಸೇನಾ ವಿಮಾನವು ರಾತ್ರಿ 10.03ರ ಸುಮಾರಿಗೆ ಅಮೃತಸರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡೀಪಾರಾದವರಲ್ಲಿ ಹರಿಯಾಣದ 44 ಮಂದಿ, ಗುಜರಾತ್‌ನ 33, ಪಂಜಾಬ್‌ನ 31, ಉತ್ತರ ಪ್ರದೇಶದ ಇಬ್ಬರು, ಉತ್ತರ ಖಂಡ ಮತ್ತು ಹಿಮಾಚಲ ಪ್ರದೇಶದಿಂದ ತಲಾ ಒಬ್ಬರು ಇದ್ದರು ಎಂದು ಅವರು ತಿಳಿಸಿದ್ದಾರೆ
ಸೇನಾ ವಿಮಾನದಲ್ಲಿ 19 ಮಹಿಳೆಯರು ಮತ್ತು ಎರಡು ನವಜಾತ ಶಿಶುಗಳು ಸೇರಿ 14 ಮಕ್ಕಳು ಇದ್ದರು
'ತಡರಾತ್ರಿ 112 ಭಾರತೀಯರು ಇಲ್ಲಿಗೆ ಬಂದಿಳಿದ್ದಾರೆ. ಎಲ್ಲರ ಆರೋಗ್ಯ ಸ್ಥಿತಿಯು ಸ್ಥಿರವಾಗಿದ್ದು, ಆಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಅವರವರ ಸ್ಥಳಕ್ಕೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ತಿಳಿಸಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ 104 ಮಂದಿ:
ಅಕ್ರಮ ವಲಸಿಗರ ವಾಪಸು ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಫೆ.5ರಂದು ಸ್ವದೇಶಕ್ಕೆ ಮರಳಿದ್ದರು.
ಈ ವಿಮಾನದಲ್ಲಿ ಬಂದವರಲ್ಲಿ ಪಂಜಾಬ್‌ನ 30, ಹರಿಯಾಣದ 33, ಗುಜರಾತ್‌ನ 33, ಉತ್ತರ ಪ್ರದೇಶ 3, ಮಹಾರಾಷ್ಟ್ರ 3, ಚಂಡೀಗಢದ ಇಬ್ಬರು ಇದ್ದರು.
ಎರಡನೇ ಬ್ಯಾಚ್‌ನಲ್ಲಿ 116 ಮಂದಿ:
ಫೆ. 15ರಂದು ಎರಡನೇ ಬ್ಯಾಚ್‌ನಲ್ಲಿ 116 ಮಂದಿ ಭಾರತೀಯರು ಅಮೃತಸರಕ್ಕೆ ಬಂದಿಳಿದಿದ್ದರು.
ಈ ವಿಮಾನದಲ್ಲಿ ಬಂದವರಲ್ಲಿ ಪಂಜಾಬ್‌ನ 65, ಹರಿಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಇದ್ದರು.
ಒಟ್ಟು 332 ಮಂದಿ ವಾಪಸ್:
ಮೊದಲ ಹಂತದಲ್ಲಿ 104 ಮಂದಿ, ಎರಡನೇ ಹಂತದಲ್ಲಿ 116 ಮಂದಿ ಸೇರಿ ಇಲ್ಲಿಯವರೆಗೆ ಅಮೆರಿಕದಿಂದ 332 ವಲಸಿಗ ಭಾರತೀಯರು ವಾಪಸ್ ಆಗಿದ್ದಾರೆ.