ನವದೆಹಲಿ: ಸರ್ಕಾರದ ಸ್ವಚ್ಛ ಭಾರತ ಮಿಷನ್ ದೇಶದಾದ್ಯಂತ 3 ಲಕ್ಷ ಮಕ್ಕಳ ಜೀವ ಉಳಿಸಿದೆ ಎಂದು ವಿಶ್ವಸಂಸ್ಥೆ ಹೇಳಿದ್ದಾಗಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್ ಪಾಟೀಲ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಬಯಲು ಶೌಚ ಮುಕ್ತ ಯೋಜನೆಯಿಂದಾಗಿ ದೇಶದಾದ್ಯಂತ 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ 60 ಕೋಟಿ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಉಪ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯು ನೈರ್ಮಲ್ಯ ಕಾಪಾಡುವುದರ ಜೊತೆಗೆ, ಮಹಿಳಾ ಸುರಕ್ಷತೆಯನ್ನೂ ಖಾತರಿ ಪಡಿಸಿದೆ. ಇಲ್ಲದಿದ್ದರೆ ಅವರು ಶೌಚಕ್ಕೆ ತೆರಳಲು ರಾತ್ರಿವರೆಗೂ ಕಾಯಬೇಕಿತ್ತು ಎಂದು ಹೇಳಿದ್ದಾರೆ.
ಮೊದಲ 5 ವರ್ಷದಲ್ಲಿ 10 ಕೋಟಿ, ಎರಡನೇ ಹಂತದಲ್ಲಿ 2 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಸ್ವಚ್ಛ ಭಾರತ ಅಭಿಯಾನದಿಂದಾಗಿ ಸುಮಾರು 3 ಲಕ್ಷ ಮಕ್ಕಳ ಜೀವ ಉಳಿಸಲಾಗಿದೆ ಎಂದು Wಊಔ ವರದಿ ಹೇಳಿದೆ' ಎಂದು ಸಚಿವರು ಹೇಳಿದ್ದಾರೆ.
ಸ್ವಚ್ಛ ಭಾರತ ಮಿಷನ್ ಮತ್ತು ಬಯಲು ಶೌಚ ಮುಕ್ತ ನೀತಿಯು ನಿರಂತರ ಪ್ರಕ್ರಿಯೆ. ಅದನ್ನು ಮುಂದಕ್ಕೆ ಕೊಂಡೊಯ್ಯಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.