ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ ಜ.13 ರಂದು ಆರಂಭವಾದ ಮಹಾಕುಂಭ ಮೇಳದ ಅಂತ್ಯಕ್ಕೆ ಇನ್ನು 15 ದಿನ ಮಾತ್ರ ಬಾಕಿಯಿದ್ದು, ಈವರೆಗೆ 45 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಕೈಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೇಳಿದೆ.
ಫೆ.26ರಂದು ಮಹಾಶಿವರಾತ್ರಿಯ ದಿನ ಕೊನೆಯ ಅಮೃತ ಸ್ನಾನ ನಡೆಯಲಿದ್ದು, ಅಂದೇ ಕುಂಭಮೇಳ ಕೊನೆಗೊಳ್ಳಲಿದೆ. ಅಂದು ಸುಮಾರು 55 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.
ಈವರೆಗೆ ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿಯಂದು ಮೂರು ಅಮೃತ ಸ್ನಾನ ನಡೆದಿದೆ. ಇನ್ನೂ ಅಪಾರ ಪ್ರಮಾಣದಲ್ಲಿ ಭಕ್ತರು ಮೇಳಕ್ಕೆ ಆಗಮಿಸುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ 74.96 ಲಕ್ಷ ಜನ ಪುಣ್ಯ ಸ್ನಾನ ಕೈಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಮೌನಿ ಅಮಾವಾಸ್ಯೆಯಂದು ಅತಿ ಹೆಚ್ಚು ಜನ ಅಂದರೆ 8 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ, ಉಳಿದಂತೆ ಮಕರ ಸಂಕ್ರಾಂತಿಯಂದು 3.5 ಕೋಟಿ ಹಾಗೂ ವಸಂತ ಪಂಚಮಿಯಂದು 2.57ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಂಗಮದಲ್ಲಿ ಮಿಂದೆದಿದ್ದಾರೆ.