ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 45 ದಿನಗಳವರೆಗೆ ನಡೆದ ಮಹಾಕುಂಭ ಮೇಳವು ಬುಧವಾರ ಮುಕ್ತಾಯವಾಯಿತು. ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳು ಸೇರುವ 'ತ್ರಿವೇಣಿ ಸಂಗಮ'ದಲ್ಲಿ ರಾತ್ರಿ ಹಗಲು ಎನ್ನದೆ ಇಷ್ಟೂ ದಿನಗಳಲ್ಲಿ ಕೋಟ್ಯಂತರ ಮಂದಿ ಮಿಂದೆದಿದ್ದಾರೆ.
ಈ ಬಾರಿಯ ಮಹಾಕುಂಭ ಮೇಳವು ಹಲವು ವಿವಾದಗಳಿಗೂ ಕಾರಣವಾಯಿತು.
ಬುಧವಾರ ಮಹಾಕುಂಭ ಮೇಳದ ಕೊನೆಯ ದಿನವೂ ಇದೇ ದಿನ ಶಿವರಾತ್ರಿಯೂ ಆಗಿದ್ದರಿಂದ ದೇಶದ ನಾನಾ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಮೇಳಕ್ಕೆ ಬಂದಿದ್ದರು. 'ಹರ ಹರ ಮಹಾದೇವ', 'ಜೈ ಮಹಾದೇವ್' ಎನ್ನುತ್ತ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. 'ಬ್ರಹ್ಮ ಮುಹೂರ್ತ'ದಲ್ಲಿ ಪವಿತ್ರ ಸ್ನಾನ ಮಾಡಲು ಮಂಗಳವಾರ ಮಧ್ಯಾಹ್ನದಿಂದಲೇ ಸಂಗಮದಲ್ಲಿ ಸರತಿ ಸಾಲು ರೂಪುಗೊಂಡಿತ್ತು.
ಸಂಗಮದ ಬಳಿ ನಿರ್ಮಿಸಲಾಗಿದ್ದ ವಿವಿಧ ಘಾಟ್‌ಗಳಲ್ಲಿ ಭಕ್ತರು 'ಪವಿತ್ರ ಸ್ನಾನ' ಕೈಗೊಂಡರು. ಸುಮಾರು 99 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಮಹಾಕುಂಭ ಮೇಳ ನಗರದಲ್ಲಿ ಬುಧವಾರ ಹಾಜರಿದ್ದ ಲಕ್ಷಾಂತರ ಜನರನ್ನು ನಿಯಂತ್ರಿಸಲು ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಒಟ್ಟು ಐದು ಸುತ್ತುಗಳಲ್ಲಿ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಗರೆಯಲಾಯಿತು.
ಬುಧವಾರವೇ ಮಹಾಕುಂಭ ಮೇಳ ಅಂತ್ಯಗೊಂಡಿದ್ದರೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ಅಧಿಕೃತ ಘೋಷಣೆ ಮಾಡಲಿದ್ದಾರೆ. ಮೇಳದ ಕೊನೇ ದಿನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಹಾಗಿದ್ದರೂ ಸದ್ಯ ಪ್ರಯಾಗರಾಜ್‌ನಲ್ಲಿರುವ ಲಕ್ಷಾಂತರ ಭಕ್ತರನ್ನು ವಾಪಸು ಅವರ ಊರುಗಳಿಗೆ ತಲುಪಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ.
'ಪ್ರಯಾಗರಾಜ್‌ನಲ್ಲಿ ಮುಂದಿನ ಕೆಲವು ದಿನಗಳವರೆಗೆ ಭಕ್ತರು ಬರಲಿದ್ದಾರೆ. ಆದ್ದರಿಂದ, ಮೇಳಕ್ಕೆ ನಿರ್ಮಿಸಿಕೊಂಡಿದ್ದ ಮೂಲಸೌಕರ್ಯಗಳನ್ನು ಕೆಲವು ದಿನಗಳವರೆಗೆ ಉಳಿಸಿಕೊಳ್ಳಲಾಗುವುದು. ಮೇಳಕ್ಕೆ ಬಂದಿದ್ದ ಸಾಧು-ಸಂತರು ಗುರುವಾರದಿಂದ ಪ್ರಯಾಗರಾಜ್‌ನಿಂದ ತೆರಳಲಿದ್ದಾರೆ. ವಾರದೊಳಗೆ ಶಿಬಿರಗಳು, ಪೆಂಡಾಲ್‌ಗಳನ್ನು ಕಳಚಲಾಗುವುದು' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಂಭಮೇಳ; ಎಷ್ಟು ವರ್ಷಕ್ಕೊಮ್ಮೆ?
ಮಹಾಕುಂಭ ಮೇಳವು 12 ವರ್ಷಕ್ಕೊಮ್ಮೆ ಜರುಗುತ್ತದೆ. ಆದರೆ, ಈ ಬಾರಿ ಮಹಾಕುಂಭ ನಡೆಯುತ್ತಿರುವ ಕಾಲಘಟ್ಟವು ಗ್ರಹಗತಿಗಳು ಕೂಡಿಬಂದಿರುವ ದೃಷ್ಟಿಯಿಂದ ಅತ್ಯಂತ ಪವಿತ್ರವಾದುದು. ಇಂಥ ಸಂಯೋಗವು 144 ವರ್ಷಕ್ಕೆ ಒಮ್ಮೆ ಬರುವಂಥದ್ದು ಎನ್ನುವುದು ಸಂತರ ಅಭಿಪ್ರಾಯ. ಇದರ ಸತ್ಯಾಸತ್ಯತೆ ಕುರಿತು ವಿರೋಧ ಪಕ್ಷಗಳೂ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು. ಈ ಸಂಖ್ಯೆಗಳೆಲ್ಲ ಉತ್ತರ ಪ್ರದೇಶ ಸರ್ಕಾರದ ಪ್ರಚಾರ ತಂತ್ರ ಎಂದೂ ಚರ್ಚೆಯಾಯಿತು.
ವಿವಾದಗಳು...
* ಮೌನಿ ಅಮಾವಾಸ್ಯೆ ದಿನ (ಜ.29) ನಡೆದ ಕಾಲ್ತುಳಿತ ಪ್ರಕರಣವು ಭಾರಿ ವಿವಾದಕ್ಕೆ ಕಾರಣವಾಯಿತು. ಕಾಂಗ್ರೆಸ್, ಸಮಾಜವಾದಿ ಪಕ್ಷವು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಘಟನೆಯಲ್ಲಿ '30 ಮಂದಿ ಮೃತಪಟ್ಟು, 60 ಜನರಿಗೆ ಗಾಯಗಳಾಗಿವೆ' ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತು. 'ನೂರಾರು ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಸುಳ್ಳು ಹೇಳುತ್ತಿದೆ' ಎಂದು ವಿರೋಧ ಪಕ್ಷಗಳು ದೂರಿದವು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಇದು ಮೃತ್ಯುಕುಂಭ' ಎಂದರು
* ಗಂಗಾ ನದಿಯ ನೀರಿನಲ್ಲಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣವು ಅಧಿಕವಾಗಿದೆ. ಸ್ನಾನ ಮಾಡಲು ಮತ್ತು ಕುಡಿಯಲು ಈ ನೀರು ಯೋಗ್ಯವಾಗಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ನೀಡಿತು. ಇದು ಕೂಡ ದೊಡ್ಡ ವಿವಾದ ಸೃಷ್ಟಿಸಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ವರದಿಯನ್ನು ತಳ್ಳಿಹಾಕಿದರು
* ಸಂಚಾರ ದಟ್ಟಣೆ ಬಗ್ಗೆ ಅನಾನುಕೂಲವಾದ ಹಲವಾರು ಘಟನೆಗಳು ನಡೆದವು. ಪ್ರಯಾಗರಾಜ್ ರೈಲು ನಿಲ್ದಾಣ ತಲುಪಿದ ಜನರು ಕಿ.ಮೀ ಗಟ್ಟಲೆ ನಡೆದು ಹೋಗುವ ಘಟನೆಗಳು ನಡೆದವು. ಪ್ರಯಾಗರಾಜ್ ಸುತ್ತಮುತ್ತಲು ಹಲವು ಕಿ.ಮೀ ದೂರದವರೆಗೆ ವಾಹನ ಸಂಚಾರ ಸ್ಥಗಿತಗೊಂಡ ಬಗ್ಗೆ ವರದಿಗಳು ಪ್ರಕಟಗೊಂಡವು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಬಗ್ಗೆ ಹಲವು ಬಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು
* ದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಮಹಾಕುಂಭ ಮೇಳಕ್ಕೆ ಹೊರಟಿದ್ದ 18 ಭಕ್ತರು ಮೃತಪಟ್ಟರು. ಮಹಾಕುಂಭ ಮೇಳ ನಡೆದ ಪ್ರದೇಶದಲ್ಲಿ ರೂಪಿಸಲಾಗಿದ್ದ ಶಿಬಿರಗಳಲ್ಲಿ ಅಗ್ನಿ ಅವಗಢಗಳು ನಡೆದ ಬಗ್ಗೆ ವರದಿಯಾದವು. 'ತ್ರಿವೇಣಿ ಸಂಗಮದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರು ಮೋಕ್ಷ ಪಡೆದುಕೊಂಡಿದ್ದಾರೆ' ಎಂದು ಹೇಳಿದ ಭಾಗೇಶ್ವರ ಧಾಮ್ ಬಾಬಾ ಅವರು ಹೇಳಿಕೆ ಬಗ್ಗೆಯೂ ಭಾರಿ ಆಕ್ರೋಶ ವ್ಯಕ್ತವಾಯಿತು
ನಂದನ್ ಗೋಪಾಲ್ ಗುಪ್ತಾ, ಉತ್ತರ ಪ್ರದೇಶ ಸಚಿವ2019ರಲ್ಲಿ ನಡೆದಿದ್ದ ಅರ್ಧಕುಂಭ ಮೇಳಕ್ಕೆ ಸುಮಾರು 24 ಕೋಟಿ ಭಕ್ತರು ಭೇಟಿ ನೀಡಿದ್ದರು. ಮಹಾಕುಂಭಕ್ಕೆ 65 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ಜಗತ್ತಿನ್ನೆಲೆಡೆಯ ಸನಾತನ ಧರ್ಮದ ಅನುಯಾಯಿಗಳು ಮಹಾಕುಂಭದಿಂದ ಸಂತಸಗೊಂಡಿದ್ದಾರೆ. ಇಲ್ಲಿ ಜಾತಿ, ವರ್ಗ ಎಂಬ ತಾರತಮ್ಯವೇ ಇರಲಿಲ್ಲ. ಎಲ್ಲರೂ ಸಂಗಮದಲ್ಲಿ ಮಿಂದೆದ್ದರು ಉತ್ತರ ಪ್ರದೇಶ ಸರ್ಕಾರಭಾರತ ಮತ್ತು ಚೀನಾವನ್ನು ಹೊರತುಪಡಿಸಿ, ಜಗತ್ತಿನ ಎಲ್ಲ ದೇಶಗಳ ಜನಸಂಖ್ಯೆಯನ್ನೂ ಮೀರಿದ ಜನರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ
66 ಕೋಟಿ; 45 ದಿನಗಳು ನಡೆದ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಭಕ್ತರ ಸಂಖ್ಯೆ
81.09 ಲಕ್ಷ; ಬುಧವಾರದಂದು ಅಂತಿಮ 'ಅಮೃತ ಸ್ನಾನ' ಕೈಗೊಂಡ ಭಕ್ತರ ಸಂಖ್ಯೆ
* ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದರು. ಹಲವು ರಾಜ್ಯಗಳ ಸಚಿವರು, ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ದಿಗ್ಗಜರು, ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಕುಟುಂಬ ಸೇರಿದಂತೆ ದೇಶದ ಹಲವು ಸೆಲೆಬ್ರಿಟಿಗಳು ಮೇಳದಲ್ಲಿ ಭಾಗವಹಿಸಿದರು.
* ಈ ಬಾರಿಯ ಮಹಾಕುಂಭ ಮೇಳದಲ್ಲಿ ಮಾಡಿದ ರೀಲ್ಸ್‌ಗಳು, ಮೇಳದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹರಿದಾಡಿತು. ಮೇಳದಲ್ಲಿ ಭಾಗವಹಿಸಿದ್ದ ಕೆಲವರು ಜಾಲತಾಣಗಳ ಮೂಲಕ ಭಾರಿ ಸದ್ದು ಮಾಡಿದರು. ಇವರಲ್ಲಿ, ಮಧ್ಯಪ್ರದೇಶದ ಹೂವು ಮಾರುವ ಮೊನಾಲೀಸಾ ಭೋಸ್ಲೆ, 'ಐಐಟಿ ಬಾಬಾ' ಖ್ಯಾತಿಯ ಅಭಯ್ ಸಿಂಗ್ ಕೂಡ ಇದ್ದಾರೆ