ಹೈದರಾಬಾದ್: ತೆಲಂಗಾಣದ ಒಟ್ಟು 3.70 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಹಿಂದುಳಿದ ವರ್ಗದವರು ಶೇಕಡಾ 46.25 ರಷ್ಟಿದ್ದಾರೆ ಎಂದು ರಾಜ್ಯದಲ್ಲಿ ನಡೆಸಿದ ಜಾತಿ ಸಮೀಕ್ಷೆಯ ವರದಿ ತಿಳಿಸಿದೆ.
ಪರಿಶಿಷ್ಟ ಜಾತಿಯವರು ಶೇ 17.43 ಮತ್ತು ಪರಿಶಿಷ್ಟ ಪಂಗಡದವರು ಶೇ 10.45ರಷ್ಟಿದ್ದಾರೆ. ಇತರೆ ಜಾತಿಗಳಿಗೆ ಸೇರಿದವರು ಶೇ 13.31, ಮುಸ್ಲಿಮರಲ್ಲಿ ಹಿಂದುಳಿದ ವರ್ಗದವರು ಶೇ 10.08 ಹಾಗೂ ಮುಸ್ಲಿಮರಲ್ಲಿ ಇತರೆ ಜಾತಿಗಳಿಗೆ ಸೇರಿದವರು ಶೇ 2.48 ರಷ್ಟಿದ್ದಾರೆ.
ಸಮೀಕ್ಷೆ ನಡೆಸಿರುವ ರಾಜ್ಯ ಯೋಜನಾ ಇಲಾಖೆಯು ತನ್ನ ವರದಿಯನ್ನು ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ನೇತೃತ್ವದ ಸಂಪುಟ ಉಪ ಸಮಿತಿಗೆ ಭಾನುವಾರ ಸಲ್ಲಿಸಿದೆ.
ಫೆಬ್ರವರಿ 4ರಂದು ರಾಜ್ಯ ಸಚಿವ ಸಂಪುಟದ ಮುಂದೆ ವರದಿಯನ್ನು ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಅದೇ ದಿನ, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವರದಿಯ ಬಗ್ಗೆ ಚರ್ಚೆ ನಡೆಯಲಿದೆ.
ಸಂಖ್ಯೆಗಳಲ್ಲಿ ನೋಡಿದಾಗ, ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಹಿಂದುಳಿದ ವರ್ಗದವರು 1.64 ಕೋಟಿ ಮಂದಿ ಇದ್ದಾರೆ. ಪರಿಶಿಷ್ಟ ಜಾತಿಯವರು 61.84 ಲಕ್ಷ, ಪರಿಶಿಷ್ಟ ಪಂಗಡದವರು 37.05 ಲಕ್ಷ, ಮುಸ್ಲಿಮರಲ್ಲಿ ಹಿಂದುಳಿದ ವರ್ಗದವರು 35.76 ಲಕ್ಷ ಹಾಗೂ ಮುಸ್ಲಿಮರಲ್ಲಿ ಇತರೆ ಜಾತಿಗಳಿಗೆ ಸೇರಿದವರು 8.80 ಲಕ್ಷ ಮಂದಿ ಇದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರ ಒಟ್ಟು ಪ್ರಮಾಣ ಶೇ 12.56ರಷ್ಟಿದೆ ಎಂದು ಸಚಿವರು ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ವರದಿಯನ್ನು ಐತಿಹಾಸಿಕ ಎಂದು ಬಣ್ಣಿಸಿದ ರೆಡ್ಡಿ, 'ಸಮೀಕ್ಷೆಯು 3.54 ಕೋಟಿ ಮಂದಿಯನ್ನು (ಜನಸಂಖ್ಯೆಯ ಶೇ 96.9) ಒಳಗೊಂಡಿದೆ' ಎಂದು ಹೇಳಿದರು.
'ಶೇ 3.1 ರಷ್ಟು ಜನರು (16 ಲಕ್ಷ) ಸಮೀಕ್ಷೆಯ ಅವಧಿಯಲ್ಲಿ ಲಭ್ಯವಿಲ್ಲದ್ದರಿಂದ ಅಥವಾ ಅದರಲ್ಲಿ ಭಾಗವಹಿಸಲು ಆಸಕ್ತಿ ತೋರಿಸದ ಕಾರಣ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ' ಎಂದು ತಿಳಿಸಿದರು.