ಮುಂಬೈ: ಪ್ರತಿ ವಾರಕ್ಕೆ ಉದ್ಯೋಗಿಗಳು 47.5 ಗಂಟೆ ಕೆಲಸ ಮಾಡಬೇಕು ಎಂದು ಐ.ಟಿ ಸೇವೆಗಳ ಕಂಪನಿ ಕ್ಯಾಪ್‌ಜೆಮಿನಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಶ್ವಿನ್ ಯಾರ್ಡಿ ಮಂಗಳವಾರ ಹೇಳಿದ್ದಾರೆ.
ನಾಸ್ಕಾಂ ಆಯೋಜಿಸಿದ್ದ ಕೆಲಸದ ಅವಧಿ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ಯೋಗಿಯು ಪ್ರತಿ ದಿನ 9 ತಾಸಿನಂತೆ ವಾರದ ಐದು ದಿನ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ವಾರಾಂತ್ಯದಲ್ಲಿ ಉದ್ಯೋಗಿಗಳಿಗೆ ಕೆಲಸದ ಕುರಿತು ಇ-ಮೇಲ್ ಕಳಿಸಿಲ್ಲ. ಇದು ಅನಗತ್ಯ ಒತ್ತಡವನ್ನು ಸೃಷ್ಟಿಸಲಿದ್ದು, ಯಾವುದೇ ಕೆಲಸವಿದ್ದರೂ ವಾರಾಂತ್ಯದ ನಂತರವೂ ಮಾಡಿಕೊಳ್ಳಬಹುದಾಗಿದೆ ಎಂದರು.
ಇತ್ತೀಚೆಗೆ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರು ಪ್ರತಿ ವಾರಕ್ಕೆ 70 ಗಂಟೆ ಮತ್ತು ಲಾರ್ಸೆನ್ ಆಯಂಡ್ ಟೊಬ್ರೊದ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯಂ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು.