ನವದೆಹಲಿ: ಗಡಿಪಾರು ಮಾಡಿರುವ ಭಾರತೀಯ ಪ್ರಜೆಗಳ ಮೇಲಿನ ದೌರ್ಜನ್ಯದ ಬಗ್ಗೆ ಭಾರತವು ಅಮೆರಿಕದೊಂದಿಗೆ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಶುಕ್ರವಾರ ಹೇಳಿದ್ದಾರೆ.
ಅಮೆರಿಕದಿಂದ ಗಡಿಪಾರಾದ 104 ಭಾರತೀಯ ಪ್ರಜೆಗಳು ಬುಧವಾರ ಅಮೃತಸರಕ್ಕೆ ಬಂದಿಳಿದ ನಂತರ ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಗಡಿಪಾರು ಮಾಡಿದವರ ಕೈಗೆ ಕೈಕೋಳ ಮತ್ತು ದೌರ್ಜನ್ಯದ ವರದಿಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಧ್ಯೆ ಭಾರತೀಯ ಪ್ರಜೆಗಳು ಎಂದು ಹೇಳಲಾದ 487 ವ್ಯಕ್ತಿಗಳನ್ನು ಗಡಿಪಾರು ಮಾಡುವ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಸೂಚನೆ ನೀಡಿದೆ. ಈ ಪೈಕಿ 295 ವ್ಯಕ್ತಿಗಳಿಗೆ ರಾಷ್ಟ್ರೀಯತೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ಅವರನ್ನು ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಅಂತಿಮವಾಗಿ ಗಡಿಪಾರು ಮಾಡಲು 487 ಭಾರತೀಯ ನಾಗರಿಕರು ಇದ್ದಾರೆ ಎಂದು ನಮಗೆ ತಿಳಿಸಲಾಗಿದೆ ಎಂದು ಮಿಸ್ರಿ ಹೇಳಿದರು. 298 ವ್ಯಕ್ತಿಗಳ ವಿವರಗಳನ್ನು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ.
ಭಾರತ ತನ್ನ ಪ್ರಜೆಗಳ ಮೇಲಿನ ದೌರ್ಜನ್ಯ ಕುರಿತು ಅಮೆರಿಕಕ್ಕೆ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ, "ಇದು ಪ್ರಸ್ತಾಪಿಸಲು ಯೋಗ್ಯವಾದ ವಿಷಯವಾಗಿದೆ. ಗಡಿಪಾರು ಮಾಡಿದವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಸಬಾರದು ಎಂದು ಅಮೆರಿಕ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದರು.
ಬ್ರೆಜಿಲ್ ಮತ್ತು ಕೊಲಂಬಿಯಾದಂತೆ ಭಾರತ ಗಡಿಪಾರಾದವರ ಮೇಲೆ ಕೈಕೋಳ ಮತ್ತು ಸರಪಳಿ ಬಳಸುವುದನ್ನು ವಿರೋಧಿಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾವು ಯುಎಸ್ ಜೊತೆ ಸಂಪರ್ಕದಲ್ಲಿದ್ದು ನಮ್ಮ ಕಳವಳವನ್ನು ವ್ಯಕ್ತಪಡಿಸಿದೇವೆ ಎಂದು ತಿಳಿಸಿದರು.