ಲಖನೌ: ಉದ್ಯೋಗಕ್ಕಾಗಿ 5,600 ನೌಕರರನ್ನು ಇಸ್ರೇಲ್‌ಗೆ ಕಳುಹಿಸಲಾಗಿದ್ದು, ಇನ್ನೂ 5,000 ಮಂದಿ ಪ್ರಕ್ರಿಯೆಯಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಉದ್ಯೋಗ ಮತ್ತು ಕಾರ್ಮಿಕ ಖಾತೆ ಸಚಿವ ಅನಿಲ್ ರಾಜ್‌ಭರ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಸದನದಲ್ಲಿ ಸಮಾಜವಾದಿ ಪಕ್ಷದ ಶಾಸಕ ಪ್ರಭು ನಾರಾಯಣ ಯಾದವ್ ಅವರ ಲಿಖಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್‌ಭರ್, ಇಸ್ರೇಲ್‌ನಲ್ಲಿರುವ ನಮ್ಮ ಕಾರ್ಮಿಕರು ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದ್ದು, ವಾರ್ಷಿಕ ₹1,000 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿದರು.
ಇಸ್ರೇಲ್‌ಗೆ ಕಳುಹಿಸಲಾಗುತ್ತಿರುವ ಕಾರ್ಮಿಕರನ್ನು ಹೊರತುಪಡಿಸಿ, ಸರಿ ಸುಮಾರು 11,000 ನೌಕರರಿಗೆ ನಿರಂತರ ಬೇಡಿಕೆಯಿದೆ ಎಂದು ರಾಜ್‌ಭರ್ ಪುನರುಚ್ಚರಿಸಿದ್ದಾರೆ.
ಜರ್ಮನಿಯಲ್ಲಿ ಅಗತ್ಯವಿರುವ 5,000 ನರ್ಸ್‌ಗಳು ಸೇರಿದಂತೆ ಸಾಗರೋತ್ತರ ಉದ್ಯೋಗಕ್ಕಾಗಿ ಅರ್ಜಿಗಳನ್ನು ರಾಜ್ಯವು ಸುಗಮಗೊಳಿಸುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಹುದ್ದೆಗಳಿಗೆ ತಿಂಗಳಿಗೆ ₹2.5 ಲಕ್ಷ ಸಂಭಾವನೆ ಇದೆ ಎಂದು ಹೇಳಿದ್ದಾರೆ.
ಈ ಪ್ರಯತ್ನಗಳ ಜೊತೆಗೆ, ಜಪಾನ್‌ನಲ್ಲಿ ಪ್ರಸ್ತುತ 12,000 ಆರೈಕೆ ಕಾರ್ಮಿಕರಿಗೆ ಬೇಡಿಕೆಯಿದೆ. ಅವರಿಗೆ ತಿಂಗಳಿಗೆ ₹1.25 ಲಕ್ಷ ಸಂಬಳದ ಪ್ಯಾಕೇಜ್ ಸಿಗಲಿದೆ ಎಂದು ಹೇಳಿದರು.
ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ ಮತ್ತು ಈ ಬೇಡಿಕೆಯನ್ನು ಪೂರೈಸಲು ನುರಿತ ಕಾರ್ಮಿಕರನ್ನು ಕಳುಹಿಸಲು ರಾಜ್ಯವು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ದೃಢಪಡಿಸಿದ್ದಾರೆ.
ಉದ್ಯೋಗ ಮೇಳಗಳನ್ನು ಆಯೋಜಿಸುವುದು, ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು, ಸೇವಾ ಮಿತ್ರ ವ್ಯವಸ್ಥೆ, ವೃತ್ತಿ ಸಮಾಲೋಚನೆ ಮತ್ತು ಮಾನವಶಕ್ತಿಯ ಹೊರಗುತ್ತಿಗೆ ಮೂಲಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ವಿವಿಧ ನಿಬಂಧನೆಗಳಿವೆ ಎಂದು ರಾಜ್‌ಭರ್ ಹೇಳಿದ್ದಾರೆ.