ಚೆನ್ನೈ: ತಮಿಳುನಾಡಿನ ಕರಾವಳಿ ಜಿಲ್ಲೆಗಳ ಸಮುದ್ರ ತೀರಗಳಲ್ಲಿ ನಡೆದಿದೆ ಎನ್ನಲಾದ ಮರಳು ಅಕ್ರಮ ಗಣಿಗಾರಿಕೆ ಹಗರಣದ ಕುರಿತು ಸಿಬಿಐ ತನಿಖೆಗೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ತಿರುನೆಲ್ವೇಲಿ, ತೂತ್ತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಖಾಸಗಿ ಕಂಪನಿಗಳು ₹5,832 ಕೋಟಿ ಮೊತ್ತದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಕೇಳಿಬಂದಿದೆ.
ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣ್ಯನ್ ಮತ್ತು ಎಂ.ಜ್ಯೋತಿರಾಮನ್ ಅವರನ್ನೊಳಗೊಂಡ ಪೀಠವು, ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳುವಂತೆ ಸಿಬಿಐಗೆ ಸೂಚಿಸಿತು.
ಸ್ವಯಂಪ್ರೇರಿತ ಪಿಐಎಲ್, ವಿ.ವಿ ಮಿನರಲ್ಸ್ ಮತ್ತು ಇತರ 29 ಮಂದಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ಈ ಆದೇಶ ಹೊರಡಿಸಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಬೇಕು. ಪ್ರಕರಣಗಳ ಎಲ್ಲ ಕಡತಗಳನ್ನು ನಾಲ್ಕು ವಾರಗಳ ಒಳಗಾಗಿ ಸಿಬಿಐಗೆ ಒಪ್ಪಿಸಬೇಕು ಎಂದು ಪೀಠವು ಹೇಳಿತು.