ತಿರುವನಂತಪುರ: ಭೂಕುಸಿತ, ಪ್ರವಾಹ ಬಾಧಿತ ವಯನಾಡ್‌ನಲ್ಲಿ ಪುನರ್ವಸತಿ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ₹529.50 ಕೋಟಿ ಸಾಲ ಮಂಜೂರು ಮಾಡಿದೆ. ಮಾರ್ಚ್ 31ರ ಒಳಗೇ ಈ ಮೊತ್ತವನ್ನು ಬಳಸಬೇಕು ಎಂಬ ಷರತ್ತನ್ನೂ ವಿಧಿಸಿದೆ.
ಬಂಡವಾಳ ಹೂಡಿಕೆ ಯೋಜನೆಯಡಿ ಈ ಮೊತ್ತವನ್ನು ಕೇಂದ್ರ ಮಂಜೂರು ಮಾಡಿದೆ.
ಆದರೆ, ಇದಕ್ಕಾಗಿ ವಿಧಿಸಿರುವ ಗಡುವು 'ಪ್ರಾಯೋಗಿಕವಾಗಿ ದೊಡ್ಡ ತೊಡಕು' ಎಂದು ರಾಜ್ಯದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಪ್ರತಿಕ್ರಿಯಿಸಿದರು.
'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು' ಯೋಜನೆಯಡಿ ಮಂಜೂರಾದ ಈ ಮೊತ್ತವನ್ನು ಷರತ್ತಿನನ್ವಯ 10 ದಿನಗಳಲ್ಲಿ ಉದ್ದೇಶಿತ ಯೋಜನೆಗಳ ಅನುಷ್ಠಾನ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕಾಗಿದೆ. ಒಂದು ವೇಳೆ ತಡವಾದರೆ, ಇಷ್ಟು ಮೊತ್ತಕ್ಕೆ ರಾಜ್ಯ ಸರ್ಕಾರ ಬಡ್ಡಿ ತೆರಬೇಕಾಗಿದೆ' ಎಂದು ಬಾಲಗೋಪಾಲ್ ಹೇಳಿದರು.
'ವಯನಾಡ್‌ನಲ್ಲಿ ಪುನರ್ವಸತಿಗಾಗಿ ಸಾಲದ ಜೊತೆಗೆ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರ ಕೋರಿತ್ತು. ನಾವು ಅನುದಾನ ನಿರೀಕ್ಷಿಸಿದ್ದೆವು. ಈಗ ಕೇಂದ್ರ ದೀರ್ಘಾವಧಿ ಸಾಲ ನೀಡಿದೆ. ಆದರೆ, ಕ್ಷಿಪ್ರವಾಗಿ ಬಳಸಿ ಎಂದು ಷರತ್ತು ವಿಧಿಸಿರುವುದರಿಂದ ಈಗ ಸಮಸ್ಯೆಯಾಗಿದೆ' ಎಂದರು.
'ಗಡುವಿನಲ್ಲಿ ಬಳಸಲು ಇರುವ ತೊಡಕುಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಈ ಮೊತ್ತವನ್ನು ಪುನರ್ವಸತಿ ಕಾರ್ಯಕ್ಕೆ ಬಳಸಲಿದ್ದೇವೆ. ಪ್ರಕೃತಿ ವಿಕೋಪ ಸಂಭವಿಸಿದಾಗ ಸಿಗುವ ಯಾವುದೇ ಅನುದಾನ ಕೇರಳ ಸರ್ಕಾರಕ್ಕೆ ಇನ್ನೂ ಲಭಿಸಿಲ್ಲ' ಎಂದು ತಿಳಿಸಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಅವರೂ ಕೇಂದ್ರ ಷರತ್ತು ವಿಧಿಸಿರುವುದನ್ನು ಟೀಕಿಸಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ವಯನಾಡ್‌ನಲ್ಲಿ ಸಂಭವಿಸಿದ್ದ ಭೂಕುಸಿತ, ಪ್ರವಾಹ ಅವಘಡಗಳಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಮೂರು ಗ್ರಾಮಗಳು ಕೊಚ್ಚಿಹೋಗಿದ್ದು, ಹಲವರು ನಿರ್ವಹಿಸಿತರಾಗಿದ್ದರು.
ವಾಸ್ತವದಲ್ಲಿ ಅನುದಾನ -ಬಿಜೆಪಿ ಸಮರ್ಥನೆ
ತಿರುವನಂತಪುರ (PTI): ವಯನಾಡ್ ಬಾಧಿತರ ಪುನರ್ವಸತಿಗೆ ಕೇಂದ್ರ ಮಂಜೂರು ಮಾಡಿರುವ ₹529.50 ಕೋಟಿ ಸಾಲ 'ವಾಸ್ತವದಲ್ಲಿ ಅನುದಾನ' ಎಂದು ರಾಜ್ಯದ ಬಿಜೆಪಿ ಘಟಕವು ಸಮರ್ಥಿಸಿಕೊಂಡಿದೆ. ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಇದು 50 ವರ್ಷದ ಅವಧಿಗೆ ನೀಡಿರುವ ಬಡ್ಡಿರಹಿತ ಸಾಲ. ಅಂದರೆ 'ವಾಸ್ತವದಲ್ಲಿ ಅನುದಾನವೇ ಆಗಿದೆ' ಎಂದರು. 'ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಯುಡಿಎಫ್ ಮೈತ್ರಿಕೂಟಕ್ಕೆ ಸಾಲ ತೀರಿಸುವ ಆತಂಕ ಬೇಡ. ಐದು ವರ್ಷದ ಬಳಿಕ ಈ ಹೊಣೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷದ್ದೇ (ಬಿಜೆಪಿ) ಆಗಿರುತ್ತದೆ' ಎಂದು ಹೇಳಿದ್ದಾರೆ. ಆದರೆ ಮಾರ್ಚ್ 31ರ ಗಡುವು ವಿಸ್ತರಿಸಲು ಒಟ್ಟಾಗಿ ಕೇಳಿಕೊಳ್ಳೋಣ. ಕೇಂದ್ರ ಇಂತಹ ಮನವಿಯನ್ನು ಪುರಸ್ಕರಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.