ನವದೆಹಲಿ: ಭಾರತ ಮತ್ತು ಕತಾರ್ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವಾಣಿಜ್ಯ ವಹಿವಾಟನ್ನು ₹2.43 ಲಕ್ಷ ಕೋಟಿಗೆ (28 ಬಿಲಿಯನ್ ಡಾಲರ್) ಹೆಚ್ಚಿಸಲು ಮಂಗಳವಾರ ಸಮ್ಮತಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕತಾರ್‌ನ ಅಮಿರ್ ಆಗಿರುವ ಶೇಖ್ ತಮೀಮ್ ಬಿನ್ ಹಮದ್ ಅಲ್ ತಾನಿ ನಡುವೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಅಲ್ಲದೆ, ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಯಿತು.
ಕಾರ್ಯತಂತ್ರ ಪಾಲುದಾರಿಕೆಗೆ ಸಂಬಂಧಿಸಿದ ಮತ್ತು ದುಪ್ಪಟ್ಟು ತೆರಿಗೆ ತಪ್ಪಿಸುವ ಪರಿಷ್ಕೃತ ಒಪ್ಪಂದಗಳು ಹಾಗೂ ಆರ್ಥಿಕತೆ, ನಿರ್ವಹಣೆ, ಸಹಕಾರ, ಯುವಜನ, ಕ್ರೀಡಾಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಪೂರಕವಾಗಿ ಐದು ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು.
'ಈ ಒಪ್ಪಂದಗಳಿಂದ ದ್ವಿಪಕ್ಷೀಯ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ವ್ಯಾಪಾರ, ಇಂಧನ ಭದ್ರತೆ, ಪ್ರಾದೇಶಿಕ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಹಕಾರ ವೃದ್ಧಿಯಾಗಲಿದೆ' ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ ತಿಳಿಸಿದರು.
'ಕಳೆದ ವರ್ಷ ಪ್ರಧಾನಿ ಅವರು ಕತಾರ್‌ಗೆ ಭೇಟಿ ನೀಡಿದ್ದಾಗ, 2048ರವರೆಗೂ ಎಲ್‌ಎನ್‌ಜಿ ಅನ್ನು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ದರಕ್ಕೆ ಆಮದು ಮಾಡಿಕೊಳ್ಳುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದರು' ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಉಭಯ ರಾಷ್ಟ್ರಗಳ ನಡುವಣ ವಹಿವಾಟು 14 ಬಿಲಿಯನ್ ಡಾಲರ್ ಇದೆ. ಇದನ್ನು ಐದು ವರ್ಷಗಳ ಅವಧಿಯಲ್ಲಿ ದುಪ್ಪಟ್ಟುಗೊಳಿಸಲು ಪ್ರಮುಖವಾಗಿ ತೀರ್ಮಾನಿಸಲಾಯಿತು ಎಂದು ಹೇಳಿದರು.
ಇದಕ್ಕೂ ಮೊದಲು ಕತಾರ್‌ನ ಅಮಿರ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಗೌರವ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅತಿಥಿಯನ್ನು ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರು ಉಪಸ್ಥಿತರಿದ್ದರು.
ಭಾರತ ಮತ್ತು ಕತಾರ್ ನಡುವೆ ಸುದೀರ್ಘ ಅವಧಿಯ ಸ್ನೇಹ ಬಾಂಧವ್ಯ, ಪರಸ್ಪರ ವಿಶ್ವಾಸವಿದೆ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಕ್ಷೇತ್ರದಲ್ಲಿ ವಹಿವಾಟು ವಿಸ್ತರಣೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಸೋಮವಾರ ರಾತ್ರಿ ನವದೆಹಲಿಗೆ ಬಂದಿಳಿದ ಅಮಿರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ವಿಮಾನನಿಲ್ದಾಣದಲ್ಲಿ ಆಲಂಗಿಸುವ ಮೂಲಕ ಬರಮಾಡಿಕೊಂಡರು.