ಅಗರ್ತಲಾ: ತ್ರಿಪುರಾದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹64 ಲಕ್ಷ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಸ್ಸಾಂನ ಶ್ರೀಭೂಮಿ ಜಿಲ್ಲೆಯಿಂದ ಬರುತ್ತಿದ್ದ ವಾಹನವನ್ನು ಉತ್ತರ ತ್ರಿಪುರ ಜಿಲ್ಲೆಯ ಬಾಗ್ಬಸ್ಸಾದಲ್ಲಿ ತಡೆದು ಶೋಧ ನಡೆಸಿದರು.
ಈ ವೇಳೆ 18 ಸೋಪ್ ಪೆಟ್ಟಿಗೆಗಳಲ್ಲಿ ತುಂಬಿಸಲಾಗಿದ್ದ 212 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಧರ್ಮನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಬಿ. ಜೊರಿನ್‌ಫಿಯಾ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಚಾಲಕ ಸಲೀಂ ಉದ್ಧೀನ್ ಮತ್ತು ಆತನ ಸಹಚರ ರಬಿಲ್ ಅಹಮ್ಮದ್ ಎಂಬುವವರನ್ನು ಬಂಧಿಸಲಾಗಿದೆ. ಕಳ್ಳಸಾಗಣೆ ಮಾಡುತ್ತಿದ್ದ ₹64 ಲಕ್ಷ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.