ನವದೆಹಲಿ: ಹೊಸ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ(ಸೋಮವಾರ) ಆರಂಭವಾಗಿದ್ದು, ಹಿಂದಿ, ಇಂಗ್ಲಿಷ್, ಸಂಸ್ಕೃತ, ಉರ್ದು, ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿವೇಶನ ಭಾಷಾ ವೈವಿಧ್ಯತೆಗೆ ಸಾಕ್ಷಿಯಾಯಿತು.
ಬಿಜೆಪಿ ಶಾಸಕ ಅರವಿಂದ ಸಿಂಗ್ ಲವ್ಲಿ ಅವರು ಎಂಟನೇ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಧಿವೇಶನ ಆರಂಭವಾಗುವುದಕ್ಕೂ ಮೊದಲು ರಾಜ್ ನಿವಾಸದಲ್ಲಿ ಲೆಫ್ಟಿನೆಂಟ್ ಸ್ಪೀಕರ್ ವಿ.ಕೆ. ಸಕ್ಸೇನಾ ಅವರು ಲವ್ಲಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅವರ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಲೋಕೋಪಯೋಗಿ ಸಚಿವ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಗೃಹ ಸಚಿವ ಆಶಿಶ್ ಸೂದ್ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಪರಿಸರ ಸಚಿವ ಮನಿಜಿಂದರ್ ಸಿಂಗ್ ಸಿರ್ಸಾ ಅವರು ಪಂಜಾಬಿ ಭಾಷೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವ ಕಪಿಲ್ ಮಿಶ್ರಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶಾಸಕ ಕರ್ನೈಲ್ ಸಿಂಗ್ ಪಂಜಾಬಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಪ್ರದ್ಯುಮ್ನ್ ರಜಪೂತ್ ಮತ್ತು ನೀಲಂ ಪಹಲ್ವಾನ್ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿಯ ತರ್ವಿಂದರ್ ಮರ್ವಾ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಧಾರ್ಮಿಕ ಘೋಷಣೆ ಕೂಗಿದ್ದು, ಇದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರಾದ ಅಮಾನತುಲ್ಲಾ ಖಾನ್ ಉರ್ದುವಿನಲ್ಲಿ, ಚಂದನ್ ಚೌಧರಿ ಮೈಥಿಲಿ ಭಾಷೆಯಲ್ಲಿ, ಅಜಯ್ ದತ್ ಇಂಗ್ಲಿಷ್‌ನಲ್ಲಿ ಮತ್ತು ಗಜೇಂದ್ರ ಯಾದವ್, ಸಂಜಯ್ ಗೋಯೆಲ್, ಜಿತೇಂದ್ರ ಮಹಾಜನ್, ಅಜಯ್ ಮಹಾವಾರ್ ಮತ್ತು ಬಿಜೆಪಿಯ ಕರ್ನೈಲ್ ಸಿಂಗ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿರೋಧ ಪಕ್ಷದ ನಾಯಕಿ ಹಾಗೂ ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಶಿ ಅವರೂ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.