ವಾರಣಾಸಿ: ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಹುಂಡಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ದಾಖಲೆಯ ರೂ.7 ಕೋಟಿ ಹಣ ಸಂಗ್ರಹವಾಗಿದೆ.
ಇಲ್ಲಿಯವರೆಗೆ ಎಣಿಸಿದ ದೇಣಿಗೆಯಲ್ಲಿ ಸಾರ್ವಜನಿಕರು ಇಷ್ಟೊಂದು ಪ್ರಮಾಣದ ಕಾಣಿಕೆ ಹಾಕಿರುವುದು ಕಂಡುಬಂದಿದೆ. ಹೆಚ್ಚುವರಿ ಹುಂಡಿಗಳೊಂದಿಗೆ ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯ ದೇಣಿಗೆಗಳನ್ನು ಇನ್ನೂ ಲೆಕ್ಕಹಾಕಬೇಕಾಗಿದೆ.
ಸುಗಮ ದರ್ಶನ ಮತ್ತು ಆರತಿ ಸೇವೆಗಾಗಿ ಟಿಕೆಟ್ ಮಾರಾಟವನ್ನು ದೇವಾಲಯದ ಆಡಳಿತ ಮಂಡಳಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದರ ಹೊರತಾಗಿಯೂ ಮಹಾಕುಂಭದ ನಂತರದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದು, ದೇವಾಲಯದ ಹುಂಡಿಗಳಲ್ಲಿ ಕಾಣಿಕೆ ಸಲ್ಲಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶಿ ವಿಶ್ವನಾಥ ದೇಗುಲದ ಉಪವಿಭಾಗಾಧಿಕಾರಿ (ಎಸ್‌ಡಿಎಂ) ಶಂಭು ಶರಣ್ ಸಿಂಗ್, ಯಾತ್ರಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ವಿಶೇಷವಾಗಿ ಮಹಾಕುಂಭದಿಂದ ಭಕ್ತರು ಹಿಂತಿರುಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ತಿಂಗಳು ಸುಮಾರು 1.5 ಕೋಟಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದು, ದರ್ಶನಕ್ಕೆ ಯಾವುದೇ ಟಿಕೆಟ್ ಇಲ್ಲದಿದ್ದರೂ ಹುಂಡಿಗಳಲ್ಲಿ ರೂ. 7 ಕೋಟಿ ದೇಣಿಗೆಯನ್ನು ಸ್ವೀಕರಿಸಿದ್ದೇವೆ. ಚಿನ್ನ ಮತ್ತು ಬೆಳ್ಳಿ ಕಾಣಿಕೆ ಹುಂಡಿಗಳಲ್ಲಿಯೂ ಕಾಣಿಕೆ ಹೆಚ್ಚಾಗಿ ಸಂಗ್ರಹವಾಗಿರುವ ಸಾಧ್ಯತೆಯಿದೆ. ಹೆಚ್ಚಿನ ಭಕ್ತರ ಆಗಮನ ಹಿನ್ನೆಲೆಯಲ್ಲಿ ಆ ಹುಂಡಿಗಳನ್ನು ಇನ್ನೂ ಲೆಕ್ಕ ಮಾಡಲು ಸಾಧ್ಯವಾಗಿಲ್ಲ ಎಂದರು.