ಭಾಗಲ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಸೋಮವಾರ ಬಿಡುಗಡೆ ಮಾಡಿದ್ದು, ದೇಶಾದ್ಯಂತ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 22,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಿದರು.
ಇಂದು ಬಿಹಾರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಪಿಎಂ ಕಿಸಾನ್ ಸಮ್ಮಾನ್ ಕಂತು ಸಹ ಬಿಡುಗಡೆ ಮಾಡಿದರು. ಈ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಉಪಸ್ಥಿತರಿದ್ದರು.
ಹಲವಾರು ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರು ಹಾಗೂ ಕೇಂದ್ರ, ರಾಜ್ಯದ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಭಾರತದ 'ಅನ್ನದಾತರು' (ರೈತರು) ಬಗ್ಗೆ ಸರ್ಕಾರ ಹೆಮ್ಮೆಪಡುತ್ತದೆ ಮತ್ತು ಅವರ ಜೀವನವನ್ನು ಸುಧಾರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರು ಪ್ರತಿ 4 ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ. ಅಂದರೆ ವರ್ಷಕ್ಕೆ 6,000 ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುವ ಹಣವನ್ನು ಪ್ರತಿ ವರ್ಷ 3 ಕಂತುಗಳಲ್ಲಿ ನೀಡಲಾಗುತ್ತದೆ.