ಇಂಫಾಲ್ (PTI): ಮಣಿಪುರದ ಇಂಫಾಲ್ ಪೂರ್ವ ಮತ್ತು ತೌಬಲ್ ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಮೂರು ನಿಷೇಧಿತ ಸಂಘಟನೆಗೆ ಸೇರಿದ 9 ಉಗ್ರರನ್ನು ಭದ್ರತಾ ಪಡೆಯು ಬಂಧಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಅಪಹರಣ ಮತ್ತು ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ನಿಷೇಧಿತ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಕ್ಷದ (ನೋಯಾನ್) ನಾಲ್ವರು ಸಕ್ರಿಯ ಸದಸ್ಯರನ್ನು ತೌಬಲ್ ಜಿಲ್ಲೆಯ ಚಿಂಗ್ಡೊಂಪೋಕ್ ಪ್ರದೇಶದಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಸುಲಿಗೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ನಿಷೇಧಿತ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಕ್ಷದ (ಪಿಡಬ್ಲ್ಯೂಜಿ) ನಾಲ್ವರು ಸಕ್ರಿಯ ಸದಸ್ಯರನ್ನು ಇಂಫಾಲ್ ಪೂರ್ವ ಜಿಲ್ಲೆಯ ಖಬಿಸೋಯಿ ಪ್ರದೇಶದಲ್ಲಿ ಭದ್ರತಾ ಪಡೆ ಶುಕ್ರವಾರ ಬಂಧಿಸಿದೆ.
ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಿಷೇಧಿತ ಯುಎನ್‌ಎಲ್‌ಎಫ್‌ನ (ಪಂಬೆ) ಒಬ್ಬ ಸಕ್ರಿಯ ಸದಸ್ಯನನ್ನು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದು, ಆತನ ಬಳಿ ಇದ್ದ ಪಿಸ್ತೂಲ್‌ವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.