ನವದೆಹಲಿ / ಚಂಡೀಗಢ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ರಾಜ್ಯ ಸರ್ಕಾರದ ಸಚಿವರು ಹಾಗೂ ಪಕ್ಷದ ಶಾಸಕರ ಜೊತೆ ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಲಿದ್ದಾರೆ.
ಸಂಪಾದಕೀಯ: ತಾನೇ ಸೃಷ್ಟಿಸಿಕೊಂಡ ತೊಡಕುಗಳು ಎಎಪಿ ಸೋಲಿಗೆ ಮುಖ್ಯ ಕಾರಣ ದೆಹಲಿ ಚುನಾವಣೆಯಲ್ಲಿ ಎಎಪಿಯ ಹೀನಾಯ ಸೋಲಿನ ಬೆನ್ನಲ್ಲೇ, ಪಕ್ಷದ ಪಂಜಾಬ್ ಘಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಲ್ಬಣಗೊಳ್ಳುತ್ತಿದೆ ಎನ್ನುವ ಊಹಾಪೋಹ ಕೇಳಿ ಬರುತ್ತಿರುವಾಗಲೇ ಈ ಸಭೆ ನಿಗದಿಯಾಗಿದೆ.
'ಆಂತರಿಕ ಭಿನ್ನಾಭಿಪ್ರಾಯ ಇದೆ ಎನ್ನುವುದು ಸತ್ಯವಲ್ಲ. ಮಂಗಳವಾರ ನಡೆಯುತ್ತಿರುವುದು ವಾಡಿಕೆಯ ಕಾರ್ಯತಂತ್ರದ ಸಭೆಯಷ್ಟೇ' ಎಂದು ಎಎಪಿ ಶಾಸಕ ಮಲ್ವಿಂದರ್ ಸಿಂಗ್ ಕಂಗ್ ಹೇಳಿದ್ದಾರೆ.
'ಪಕ್ಷ ಎನ್ನುವುದು ನಿರಂತರ ಪ್ರಕ್ರಿಯೆ. ಭವಿಷ್ಯದ ಬಗ್ಗೆ ಕಾರ್ಯತಂತ್ರ ರೂಪಿಸಲು ಎಲ್ಲಾ ಘಟಕದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹಾಗೂ ಎಎಪಿ ಶಾಸಕರು ಅರವಿಂದ ಕೇಜ್ರಿವಾಲ್ ಜೊತೆ ಸಭೆ ನಡೆಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ದೆಹಲಿ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದು ಹಾಗೂ 2027ರ ಪಂಜಾಬ್ ಚುನಾವಣೆ ಬಗ್ಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
10 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಎಎಪಿಯು, ಇತ್ತೀಚೆಗೆ ನಡೆದ ಚುನಾವನೆಯಲ್ಲಿ ಹೀನಾಯ ಸೋಲು ಕಂಡಿತ್ತು. 70 ಸದಸ್ಯ ಬಲದದ ವಿಧಾನಸಭೆಯಲ್ಲಿ ಕೇವಲ 22 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ.
ಇದರ ಬೆನ್ನಲ್ಲೇ ಪಕ್ಷದ ಪಂಜಾಬ್ ಘಟಕದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದ್ದು, ಹೀಗಾಗಿ ಮಂಗಳವಾರದ ಸಭೆ ಪ್ರಾಮುಖ್ಯತೆ ಪಡೆದಿದೆ. ಕೆಲವು ಶಾಸಕರು ಪಕ್ಷದ ನಾಯಕರ ಮೇಲೆ ಅಸಮಾಧಾನಿತರಾಗಿದ್ದು, ಬೇರೆ ಆಯ್ಕೆಯ ಬಗ್ಗೆ ಒಲವು ತೋರಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
2022ರ ಪಂಜಾಬ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದ ಎಎಪಿ 117 ಕ್ಷೇತ್ರಗಳ ಪೈಕಿ 92ರಲ್ಲಿ ಗೆದ್ದುಕೊಂಡಿತ್ತು. ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳು ಆಂತರಿಕ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಪಕ್ಷದ ದೆಹಲಿ ನಾಯಕತ್ವವು ಪಂಜಾಬ್‌ನ ಆಡಳಿತದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಕೆಲವರು ದೂರಿದ್ದಾರೆ.
ಅಲ್ಲದೆ ಕೇಜ್ರಿವಾಲ್ ಅವರು ಪಂಜಾಬ್ ರಾಜಕೀಯದ ಮೇಲೆ ಹೆಚ್ಚಿನ ಗಮನ ಹರಿಸಬಹುದು ಎನ್ನುವ ಊಹಾಪೋಹಗಳೂ ಇವೆ.
ಸದ್ಯ ಲೂಧಿಯಾನ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಅಲ್ಲಿ ಕೇಜ್ರಿವಾಲ್ ಸ್ಪರ್ಧೆ ಮಾಡಿ, ಪಂಜಾಬ್ ಸರ್ಕಾರದ ಭಾಗವಾಬಹುದು ಎನ್ನುವ ಮಾತುಗಳೂ ಚಾಲ್ತಿಯಲ್ಲಿವೆ.
ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಎಪಿ ಕೇವಲ 3ರಲ್ಲಿ ಮಾತ್ರ ಗೆದ್ದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ದೆಹಲಿಯಲ್ಲಿ ಪಕ್ಷ ಸೋತಿದೆ.
ಸದ್ಯ ಪಂಜಾಬ್‌ನಲ್ಲಿ ಮಾತ್ರ ಪಕ್ಷ ಅಧಿಕಾರದಲ್ಲಿದ್ದು, ಮಂಗಳವಾರ ಸಭೆಯು ಪಕ್ಷದ ಭವಿಷ್ಯದ ದೃಷ್ಠಿಯಿಂದಲೂ ಪ್ರಮುಖವೆನಿಸಿದೆ.