ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಟ್ರಂಪ್ ಎಐ ವಿಡಿಯೊ ಹಂಚಿಕೊಂಡಿದ್ದು 'ಟ್ರಂಪ್ ಗಾಜಾ' ಎಂದು ಕರೆದುಕೊಂಡಿದ್ದಾರೆ.
ಯಾವುದೇ ಕ್ಯಾಪ್ಶನ್‌ಗಳಿಲ್ಲದೆ ಹಂಚಿಕೊಂಡಿರುವ ವಿಡಿಯೊದ ಆರಂಭದಲ್ಲಿ ಯುದ್ಧ ಪೀಡಿತ ಗಾಜಾದಲ್ಲಿ ಸೈನಿಕರು, ನೆಲದ ಮೇಲೆ ಬಿದ್ದ ರಕ್ತದ ಕಲೆಗಳು ಕಾಣಿಸುತ್ತವೆ, ಅದರ ಮೇಲೆ ಮುಂದೇನು? ಎನ್ನುವ ಪ್ರಶ್ನೆ, ಅದರ ನಂತರ ಹೊಸ ಗಾಜಾದ ಚಿತ್ರಣ ತೆರೆದುಕೊಳ್ಳುತ್ತದೆ. 'ಟ್ರಂಪ್ ಗಾಜಾ ನಂಬರ್ 1' ಎನ್ನುವ ಸಾಲು ಕಾಣಿಸಿಕೊಳ್ಳುತ್ತದೆ. ಬಳಿಕ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಹೊಸ ಗಾಜಾದಲ್ಲಿ ಬಿಸಿಲಿಗೆ ಮೈಯೊಡ್ಡಿ ಕುಳಿತಿರುವುದು, ಉದ್ಯಮಿ ಇಲಾನ್ ಮಸ್ಕ್ ಆಹಾರವನ್ನು ಸವಿಯುತ್ತಿರುವುದು, ಪ್ಯಾಲಿಸ್ಟೀನ್ ಮಕ್ಕಳ ಮೇಲೆ ಡಾಲರ್‌ಗಳ (ನೋಟುಗಳು) ಮಳೆ ಬೀಳುವ ದೃಶ್ಯಗಳು, ಎಲ್ಲೆಲ್ಲೂ ಟ್ರಂಪ್ ಪ್ರತಿಮೆಗಳಿರುವುದನ್ನು ಕಾಣಬಹುದಾಗಿದೆ.
ಇದೇ ವಿಡಿಯೊದಲ್ಲಿ ಪ್ಯಾಲಿಸ್ಟೀನಿಯನ್ ಅರಬ್ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿ ಬೆಲ್ಲಿ ಡ್ಯಾನ್ಸ್ ಮಾಡುವ ದೃಶ್ಯವೂ ಇದೆ. ಇದು ಟ್ರಂಪ್ ಅವರು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವುದರ ಸೂಚಕ ಎಂದು ಹೇಳಲಾಗಿದೆ.