ನವದೆಹಲಿ (PTI): ಅನ್ಯ ವ್ಯಕ್ತಿಗಳ ಬ್ಯಾಂಕ್ ಖಾತೆಗಳನ್ನು ಅವರಿಗೆ ಗೊತ್ತಿಲ್ಲದಂತೆ ಸೈಬರ್ ವಂಚಕರು ಬಳಸುವುದನ್ನು ಪತ್ತೆ ಹಚ್ಚಲು 'ಕೃತಕ ಬುದ್ಧಿಮತ್ತೆ' (ಎ.ಐ) ತಂತ್ರಜ್ಞಾನ ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
'ಸೈಬರ್ ಭದ್ರತೆ' ಮತ್ತು 'ಸೈಬರ್ ಅಪರಾಧ' ಕುರಿತು ಸೋಮವಾರ ನಡೆದ ಗೃಹ ಇಲಾಖೆಯ ಸಂಸದೀಯ ಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ರಾಷ್ಟ್ರೀಯ ಭದ್ರತಾ ಕಾರಣಕ್ಕಾಗಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (14ಸಿ), ಸರ್ಕಾರದ ಸೈಬರ್ ಅಪರಾಧ ನಿಯಂತ್ರಣ ಮತ್ತು ಪತ್ತೆ ವಿಭಾಗಗಳ ಶಿಫಾರಸುಗಳ ಮೇರೆಗೆ 805 ಆಯಪ್‌ಗಳು ಮತ್ತು 3,266 ವೆಬ್‌ಸೈಟ್ ಲಿಂಕ್‌ಗಳನ್ನು ನಿಷೇಧಿಸಲಾಗಿದೆ ಎಂದೂ ತಿಳಿಸಿದರು.