HEALTH TIPS

ಸಂಭಲ್‌ನ ಶಾಹಿ ಜಮಾ ಮಸೀದಿ ಶುಚಿಗೊಳಿಸಲು ASIಗೆ ಅಲಹಾಬಾದ್ ಹೈಕೋರ್ಟ್‌ ನಿರ್ದೇಶನ

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಮಾ ಮಸೀದಿಯನ್ನು ಶುಚಿಗೊಳಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ASI) ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಆದರೆ ಸುಣ್ಣ ಬಣ್ಣ ಬಳಿಯಲು ಆದೇಶ ನೀಡದಂತೆಯೂ ಹೇಳಿದೆ.

ರಮ್ಜಾನ್ ಮಾಸ ಇರುವುದರಿಂದ ಮಸೀದಿಯನ್ನು ಶುಚಿಗೊಳಿಸಿ, ಬಣ್ಣ ಹಚ್ಚಲು ಅನುಮತಿ ನೀಡುವಂತೆ ಜಮಾ ಮಸೀದಿಯ ನಿರ್ವಹಣಾ ಸಮಿತಿಯು ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರೋಹಿತ್ ರಂಜನ್ ಅಗರವಾಲ್‌, 'ಮಸೀದಿ ಆವರಣವನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಇದಕ್ಕಾಗಿ ಮೂವರು ಅಧಿಕಾರಿಗಳ ತಂಡ ರಚಿಸಬೇಕು' ಎಂದಿದ್ದಾರೆ.

'ಮಸೀದಿಯೊಳಗೆ ಸಿರಾಮಿಕ್ ಅಳವಡಿಸಲಾಗಿದ್ದು, ಅದಕ್ಕೆ ಸುಣ್ಣ, ಬಣ್ಣದ ಅಗತ್ಯವಿಲ್ಲ' ಎಂದು ಎಎಸ್‌ಐ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಮಸೀದಿ ಸಮಿತಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ, 'ಹಬ್ಬದ ಹಿನ್ನೆಲೆಯಲ್ಲಿ ಮಸೀದಿ ಆವರಣವನ್ನು ಶುಚಿಗೊಳಿಸಿ, ಬಣ್ಣ ಬಳಿದು, ದೀಪಾಲಂಕಾರ ಮಾಡಬೇಕಿದೆ. ಈ ಪ್ರಕ್ರಿಯೆಯಿಂದ ಯಾವುದೇ ಸಮಸ್ಯೆ ಎದುರಾಗದು ಎಂದು ಭರವಸೆ ನೀಡಲಾಗುವುದು' ಎಂದು ಕೋರಿದರು.

ಈ ಕೋರಿಕೆಯನ್ನು ಪರಿಗಣಿಸಿದ ನ್ಯಾಯಪೀಠ, 'ಮಸೀದಿಯಲ್ಲಿ ದೂಳು ಒರೆಸಬೇಕು. ಆವರಣದಲ್ಲಿ ಬೆಳೆದಿರುವ ಹುಲ್ಲನ್ನು ಕತ್ತರಿಸಿ ಶುಚಿಗೊಳಿಸಬೇಕು' ಎಂದು ನಿರ್ದೇಶಿಸಿತು.

ಮೊಘಲ್‌ ದೊರೆ ಬಾಬರ್‌ 1526ರಲ್ಲಿ ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂಬ ಅರ್ಜಿ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ, ಕಮಿಷನರ್ ಅವರು ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ನವೆಂಬರ್‌ 19ರಂದು ಆದೇಶ ನೀಡಿತ್ತು. ಜತೆಗೆ ಮಸೀದಿ ಪ್ರವೇಶ ದ್ವಾರದಲ್ಲಿರುವ ಬಾವಿಗೆ ಸಂಬಂಧಿಸಿದ ವಿವಾದವೂ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಬಾವಿಗೆ ಐತಿಹಾಸಿಕ ಮಹತ್ವ ಇದೆ. ಬಹಳ ವರ್ಷಗಳಿಂದಲೂ ಇದೇ ಬಾವಿಯ ನೀರನ್ನು ಬಳಸಲಾಗುತ್ತಿದೆ. ಬಾವಿಯು ಮಸೀದಿ ವ್ಯಾಪ್ತಿಯಿಂದ ಹೊರಗಿದ್ದು, ಇದಕ್ಕೆ ಪೂಜೆ ಮಾಡುತ್ತಿರುವ ಇತಿಹಾಸ ಇದೆ. ಬಾವಿಯ ಅರ್ಧ ಭಾಗ ಮಸೀದಿ ಆವರಣದೊಳಗೆ, ಮತ್ತೊಂದು ಭಾಗ ಹೊರಗಿದೆ ಎಂದೂ ಮುಸ್ಲಿಂ ಹಾಗೂ ಹಿಂದೂ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ನಂತರ ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸಲು ನ್ಯಾಯಾಲಯ ನಿರ್ದೇಶಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries