ನವದೆಹಲಿ: ಮೋದಿ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ತಾವು ಬಾಂಗ್ಲಾದೇಶ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಬಾಂಗ್ಲಾ ವಿಚಾರವಾಗಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ.
ಮುಂದಿನ ವಾರವೇ ಭಾರತ ಮಿಷನ್ ಬಾಂಗ್ಲಾದೇಶಕ್ಕೆ ಚಾಲನೆ ನೀಡಲಿದೆ. ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿ ಬಳಿಕ ಇಂಡೋ-ಬಾಂಗ್ಲಾ ಸಭೆ ಮುಂದಿನ ವಾರ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶದ ಗಡಿ ಪಡೆಗಳು ನವದೆಹಲಿಯಲ್ಲಿ ತಮ್ಮ ದ್ವೈವಾರ್ಷಿಕ ಮಾತುಕತೆಗಳನ್ನು ನಡೆಸಲಿದ್ದು, ಗಡಿ ಬೇಲಿ ನಿರ್ಮಾಣ ಮತ್ತು ಬಿಎಸ್‌ಎಫ್ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ಬಾಂಗ್ಲಾದೇಶದ ದುಷ್ಕರ್ಮಿಗಳು ನಡೆಸಿದ ದಾಳಿಗಳು ಚರ್ಚೆಯ ಅಂಶಗಳಾಗಿವೆ ಎಂದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ.
ಬಿಎಸ್‌ಎಫ್ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ನಡುವಿನ 55 ನೇ ಮಹಾನಿರ್ದೇಶಕರ ಮಟ್ಟದ ಗಡಿ ಸಮನ್ವಯ ಸಭೆಯನ್ನು ಫೆಬ್ರವರಿ 17 ಮತ್ತು 20 ರ ನಡುವೆ ನವದೆಹಲಿಯ ಗಡಿ ಭದ್ರತಾ ಪಡೆ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗುವುದು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಎರಡೂ ಕಡೆಯ ನಡುವಿನ ಮೊದಲ ಉನ್ನತ ಮಟ್ಟದ ಸಭೆ ಇದಾಗಿರಲಿದೆ.
ಬಿಎಸ್‌ಎಫ್ ಮಹಾನಿರ್ದೇಶಕ (ಡಿಜಿ) ದಲ್ಜಿತ್ ಸಿಂಗ್ ಚೌಧರಿ ಭಾರತದ ನೇತೃತ್ವ ವಹಿಸಲಿದ್ದು, ಬಿಜಿಬಿ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಮೊಹಮ್ಮದ್ ಅಶ್ರಫುಜ್ಜಮಾನ್ ಸಿದ್ದಿಕಿ ವಹಿಸಲಿದ್ದಾರೆ.
ಬಾಂಗ್ಲಾದೇಶ ಮೂಲದ ದುಷ್ಕರ್ಮಿಗಳು/ರಾಷ್ಟ್ರೀಯರಿಂದ ಬಿಎಸ್‌ಎಫ್ ಸಿಬ್ಬಂದಿ ಮತ್ತು ಭಾರತೀಯ ನಾಗರಿಕರ ಮೇಲೆ ದಾಳಿ/ದಾಳಿ ತಡೆಗಟ್ಟುವಿಕೆ, ಗಡಿಯಾಚೆಗಿನ ಅಪರಾಧಗಳನ್ನು ತಡೆಯುವುದು, ಒಂದೇ ಸಾಲಿನ ಬೇಲಿ ನಿರ್ಮಾಣ, ಬಾಂಗ್ಲಾದೇಶದಲ್ಲಿ ಭಾರತೀಯ ದಂಗೆಕೋರ ಗುಂಪುಗಳ ವಿರುದ್ಧ ಕ್ರಮ, ಗಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಂಘಟಿತ ಗಡಿ ನಿರ್ವಹಣಾ ಯೋಜನೆ ಮತ್ತು ವಿಶ್ವಾಸ ವರ್ಧನೆಯ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಂಟಿ ಪ್ರಯತ್ನಗಳು ಮತ್ತು ಇತರ ವಿಷಯಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.