ನವದೆಹಲಿ: ಜಂಕ್ ಫುಡ್ ಸೇವನೆ ಪ್ರಮಾಣವು ಕೆಲವು ವರ್ಷಗಳಿಂದ ಹಲವು ಪಟ್ಟು ಹೆಚ್ಚಾಗಿದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಜೀತ್ ಕುಮಾರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಆಹಾರಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸರ್ಕಾರವು ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದನದಲ್ಲಿ ಶೂನ್ಯ ಅವಧಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಂಸದ, 'ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಪ್ರಮಾಣ ಅಧಿಕವಾಗಿದ್ದರೂ, ಕಡಿಮೆ ಪೌಷ್ಠಿಕಾಂಶ ಹೊಂದಿರುವ ಜಂಕ್ ಫುಡ್ ಸೇವನೆ ಆತಂಕಕಾರಿಯಾಗಿ ಏರಿಕೆಯಾಗಿದೆ' ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) 2023ರ ವರದಿಯನ್ನು ಉಲ್ಲೇಖಿಸಿರುವ ಅವರು, 2006ರಿಂದ 2019ರ ಅವಧಿಯಲ್ಲಿ ಪೊಟ್ಟಣಗಳಲ್ಲಿ ದೊರೆಯುವ ಜಂಕ್ ಫುಡ್ ಸೇವನೆ ಪ್ರಮಾಣ 40 ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
'ಜಂಕ್ ಫುಡ್ ಸೇವನೆಯ ಏರಿಕೆಯು ದೇಶದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು' ಎಂದೂ ಆತಂಕ ವ್ಯಕ್ತಪಡಿಸಿರುವ ಅವರು, ಐಸಿಎಂಆರ್ ವರದಿಯನ್ನು ಉಲ್ಲೇಖಿಸಿದ್ದಾರೆ. '1990ರಲ್ಲಿ ಇಂತಹ ಕಾಯಿಲೆಗಳಿಂದ ಮೃತಪಟ್ಟವರ ಪ್ರಮಾಣವು ಶೇ 37.9ರಿಂದ 2016ರ ಹೊತ್ತಿಗೆ ಶೇ 61.8ಕ್ಕೆ ಏರಿಕೆಯಾಗಿದೆ' ಎಂದು ತಿಳಿಸಿದ್ದಾರೆ.
ಹಾಗೆಯೇ, 'ಜಾಹೀರಾತುಗಳು ಮಕ್ಕಳನ್ನು ಗುರಿಯಾಗಿಸುತ್ತಿವೆ. ಅದರಂತೆ, ಮಕ್ಕಳೂ ಜಂಕ್ ಫುಡ್ ವ್ಯಸನಿಗಳಾಗುತ್ತಿರುವುದು ಆಘಾತಕಾರಯಾಗಿದೆ. ಜನಸಂಖ್ಯೆಯ ಶೇ 41ರಷ್ಟು ಮಕ್ಕಳೇ ಇದ್ದಾರೆ. ಮಕ್ಕಳು ಅನಾರೋಗ್ಯಪೀಡಿತ ನಾಗರಿಕರಾಗಿ ಬೆಳೆಯುವುದು ಮತ್ತಷ್ಟು ಅಪಾಯಕಾರಿ' ಎಂದು ವಿವರಿಸಿದ್ದಾರೆ.
ಒಡಿಶಾದವರಾದ ಸುಜೀತ್, 'ಉತ್ತಮ ಪದಾರ್ಥಗಳಿಂದ ತಯಾರಿಸಿ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ಬ್ರಾಂಡ್‌ಗಳೇ ಭಾರತದಲ್ಲಿ ಅಗ್ಗದ ಉತ್ಪನ್ನಗಳನ್ನು ಬಿಕರಿ ಮಾಡುತ್ತಿವೆ. ನಮ್ಮ ನೀತಿ ನಿಯಮಗಳಲ್ಲಿನ ಲೋಪದೋಷಗಳ ಲಾಭ ಪಡೆಯುತ್ತಿರುವ ಇಂತಹ ಬ್ರಾಂಡ್‌ಗಳು, ಜನರ ಆರೋಗ್ಯಕ್ಕಿಂತಲೂ ಲಾಭ ಗಳಿಸುವುದಕ್ಕೆ ಒತ್ತು ನೀಡುತ್ತಿವೆ. ಸರ್ಕಾರವು, ನಿಯಮಗಳನ್ನು ಬಿಗಿಗೊಳಿಸಲು ಮುಂದಾಗಬೇಕು' ಎಂದು ಒತ್ತಾಯಿಸಿದ್ದಾರೆ.
'ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕಠಿಣ ಕ್ರಮಕ್ಕೆ ಮುಂದಾಗಬೇಕು. ಜಂಕ್ ಫುಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಪರಿಗಣಿಸಬೇಕು. ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂಬುದನ್ನು ಪೊಟ್ಟಣಗಳ ಮೇಲೆ ಸ್ಪಷ್ಟವಾಗಿ ಕಾಣುವಂತೆ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.